UN NETWORKS
ಪಾವೂರು: ಪ್ರತಿ ಮನುಷ್ಯ, ಜೀವಿಯಲ್ಲೂ ಒಂದೊಳ್ಳೆಯ ಗುಣ ಇರುತ್ತದೆ, ಆದರೆ ಅದನ್ನು ಗುರುತಿಸುವವರ ಕೊರತೆ ಇದೆ ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಡಾ.ಪ್ರಶಾಂತ್ ಕುಮಾರ್ ಕೆ.ಎಸ್. ಅಭಿಪ್ರಾಯಪಟ್ಟರು.
ಪಾವೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಂಟು ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪದೋನ್ನತಿಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ರೋಟರಿ ಕ್ಲಬ್ ಸಹಕಾರದಲ್ಲಿ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ತನ್ನ ಅವಧಿಯಲ್ಲಿ ಶಾಲೆ ಅಭಿವೃದ್ಧಿ ಕಾಣಬೇಕಾದರೆ ಜನಪ್ರತಿನಿಧಿಗಳು ಒದಗಿಸಿಕೊಟ್ಟ ಸರ್ಕಾರಿ ಅನುದಾನ, ಶಿಕ್ಷಣ ಪ್ರೇಮಿಗಳು, ಊರಿನ ಜನರು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರ ಕಾರಣವಾಗಿದ್ದು, ತಾನು ನಿಮಿತ್ತ ಮಾತ್ರ. ಪದೋನ್ನತಿಗೊಂಡರೂ ಜೀವನದಲ್ಲಿ ಎಂದಿಗೂ ಪಾವೂರು ಶಾಲೆ, ಗ್ರಾಮಸ್ಥರ ಸಹಕಾರ ಮರೆಯಲಾಗದು ಎಂದು ಹೇಳಿದರು.
ಕೊಣಾಜೆ ವಲಯ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಂಕರಾನಂದ ಎನ್.ಇನವಳ್ಳಿ ಮಾತನಾಡಿ, ಸಭ್ಯತೆ, ಕ್ರಿಯಾಶೀಲತೆ, ಪಾಂಡಿತ್ಯ ಹೊಂದಿರುವ ಪ್ರಶಾಂತ್ ಅವರು ವಿದ್ಯಾರ್ಥಿಗಳನ್ನು ಕುಟುಂಬಿಕರಂತೆ ನೋಡಿಕೊಳ್ಳುತ್ತಿದ್ದರು ಎಂದರು.ಅಧ್ಯಕ್ಷತೆ ವಹಿಸಿದ್ದ ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಫಿರೋಜ್ ಮಲಾರ್, ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲೂ ಪ್ರಶಾಂತ್ ಅವರ ಕೊರತೆ ಎದ್ದು ಕಾಣಲಿದೆ ಎಂದು ತಿಳಿಸಿದರು. ಇದೇ ಸಂದರ್ಭ ಸರ್ಕಾರದಿಂದ ಕೊಡಲ್ಪಟ್ಟ ಪಾದರಕ್ಷೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪಾವೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೀಲಾವತಿ ನಾಟ್ರಕೋಡಿ, ನಿವೃತ್ತ ಸೇನಾನಿ ವಿಕ್ರಂ ದತ್ತ, ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ರಾಜ್ಗೋಪಾಲ್ ರೈ, ಗುತ್ತಿಗೆದಾರ ವಿನ್ಸೆಂಟ್ ಡಿಸೋಜ, ಪಾವೂರು ಘಟ ರೋಟರಿ ಅಧ್ಯಕ್ಷ ಪೀಯುಸ್ ಡಿಸೋಜ, ಪದಾಧಿಕಾರಿಗಳಾದ ಭೋಜರಾಜ್ ಪಂಡಿತ್, ಪ್ರಭಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯಿತಿ ಸದಸ್ಯ ವಿವೇಕ್ ರೈ ಸ್ವಾಗತಿಸಿದರು. ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕರುಣಾ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜಮೀಲಾ ವಂದಿಸಿದರು. ಆಶಾವೀರಾವಾಸ್ ಕಾರ್ಯಕ್ರಮ ನಿರೂಪಿಸಿದರು.
`ಡಾ.ಪ್ರಶಾಂತ್ ಅವರು ಕಳೆದ ಎಂಟು ವರ್ಷಗಳ ಸೇವೆಯಲ್ಲಿ ಶಿಸ್ತಿಗೆ ಆದ್ಯತೆ ನೀಡಿದ್ದಾರೆ, ಶಾಲೆಯ ಸೌಂದರ್ಯ, ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದ್ದರಿಂದ ಉತ್ತಮ ಶಾಲೆ ಎನಿಸಿಕೊಳ್ಳುವಂತಾಗಿದೆ’
ಕರುಣಾ ಎಸ್, ಪ್ರಭಾರ ಮುಖ್ಯ ಶಿಕ್ಷಕ


