UN NETWORKS
ಉಳ್ಳಾಲ: ಪಂಪ್ ವೆಲ್, ತೊಕ್ಕೊಟ್ಟು, ತಲಪಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮೇಲ್ಸೇತುವೆ ಸಹಿತ ತಕ್ಷಣ ಪೂರ್ಣಗೊಳಿಸಬೇಕು, ಅಕ್ರಮವಾಗಿ ನಡೆಯುತ್ತಿರುವ ಟೋಲ್ ಸಂಗ್ರಹವನ್ನು ರದ್ದುಗೊಳಿಸಬೇಕು, ತೊಕ್ಕೊಟ್ಟು ಸಹಿತ ಹೆದ್ದಾರಿಯಲ್ಲಿ ಹದಗೆಟ್ಟ ರಸ್ತೆಗಳನ್ನು ಆದ್ಯತೆಯಲ್ಲಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಆಗಸ್ಟ್ 5 ರಂದು ತೊಕ್ಕೊಟ್ಟು ಮೇಲ್ಸೇತುವೆ ಬಳಿಯಿಂದ ತಲಪಾಡಿ ಟೋಲ್ ಗೇಟ್ ವರಗೆ ಪಾದಯಾತ್ರೆ, ಟೋಲ್ ಗೇಟ್ ಸಮೀಪ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷರಾದ ಜೀವನ್ ರಾಜ್ ಕುತ್ತಾರ್ ಹೇಳಿದರು.
ಆ. 5 ರಂದು ನಡೆಯಲಿರುವ ಕಾಲ್ನಡಿಗೆ ಜಾಥ `ತಲಪಾಡಿ ಚಲೋ’ ಯಶಸ್ವಿಗಾಗಿ ಗುರುವಾರ ತಲಪಾಡಿಯ ಕೆ.ಸಿ ರೋಡ್ ನಲ್ಲಿ ನಡೆದ ಊರ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪಂಪ್ ವೆಲ್, ತೊಕ್ಕೊಟ್ಟು, ತಲಪಾಡಿ ಭಾಗದಲ್ಲಿ ಆರಂಭಗೊಂಡು ಹತ್ತು ವರ್ಷಗಳಾಗಿವೆ. ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿತನ, ಗುತ್ತಿಗೆ ಕಂಪೆನಿಗಳ ಕಳಪೆ ನಿರ್ವಹಣೆ, ಅವೈಜ್ಞಾನಿಕ ಕಾಮಗಾರಿ, ತಮ್ಮ ಜವಾಬ್ದಾರಿಗಳ ಅರಿವಿಲ್ಲದ ಜನಪ್ರತಿನಿಧಿಗಳಿಂದಾಗಿ ಇಂದಿಗೂ ರಸ್ತೆ ನಿರ್ಮಾಣ ಪೂರ್ಣಗೊಂಡಿಲ್ಲ. ನಿರ್ಮಾಣಗೊಳ್ಳದ ಸರ್ವಿಸ್ ರಸ್ತೆಗಳು, ಅರ್ಧದಲ್ಲಿ ನಿಂತಿರುವ ಪಂಪ್ ವೆಲ್, ತೊಕ್ಕೊಟ್ಟು ಮೇಲ್ಸೇತುವೆಗಳು ಪ್ರಯಾಣಿಕರ ಜೀವ ತಿನ್ನುತ್ತಿದೆ. ಒಂದೆಡೆ ಅರ್ಧಂಬರ್ಧ ರಸ್ತೆಗಳಿಂದ ಸರಣಿ ಅಪಘಾತಗಳು ನಡೆದು ಪ್ರಾಣ ಹಾನಿಗೆ ಕಾರಣವಾದರೆ ಮತ್ತೊಂದೆಡೆ ಹೃದಯ ಭಾಗದಲ್ಲಿ ಅರ್ಧಕ್ಕೆ ನಿಂತ ಮೇಲ್ಸೇತುವೆಗಳು, ಹೊಂಡಗಳಿಂದ ತುಂಬಿದ ತಾತ್ಕಾಲಿಕ ರಸ್ತೆಗಳಿಂದ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿವೆ. ತೊಕ್ಕೊಟ್ಟು, ಪಂಪ್ ವೆಲ್ ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಗಳು ಒಮ್ಮೊಮ್ಮೆ ಗಂಟೆಗಟ್ಟಲೆ ಮುಂದುವರಿದು ಈ ಭಾಗದ ಜನತೆ ಯಮಯಾತನೆ ಪಡುತ್ತಿದ್ದಾರೆ. ಬೆಳಿಗ್ಗೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ತಲುಪಲಾಗುತ್ತಿಲ್ಲ. ಜನತೆ ಸಮಯಕ್ಕೆ ಸರಿಯಾಗಿ ಉದ್ಯೋಗದ ಸ್ಥಳಗಳಿಗೆ ತೆರಳಲಾಗುತ್ತಿಲ್ಲ. ಸಂಜೆಯ ನಂತರ ಈ ಭಾಗದ ಜನ ಮಂಗಳೂರಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಯ ಗುತ್ತಿಗೆ ಪಡೆದಿರುವ “ನವಯುಗ” ಕಂಪೆನಿಯ ಬೇಜವಾಬ್ದಾರಿ ನಡವಳಿಕೆ. ಕಂಪೆನಿ ಗುತ್ತಿಗೆ ಪಡೆದ ನಿಯಮಗಳ ಪ್ರಕಾರ ಕಾಲಮಿತಿಯ ಒಳಗಡೆ ಸರ್ವೀಸ್ ರಸ್ತೆ, ಮೇಲ್ಸೇತುವೆ ಸಹಿತ ರಸ್ತೆ ಅಗಲೀಕರಣದ ಎಲ್ಲಾ ಕೆಲಸಗಳನ್ನು ಮುಗಿಸಬೇಕು. ಕನಿಷ್ಟ ಎಪ್ಪತ್ತೈದು ಭಾಗ ಕಾಮಗಾರಿ ಮುಗಿದ ನಂತರ ಟೋಲ್ ಸಂಗ್ರಹಿಸಬಹುದು, ಉಳಿದ ಕಾಮಗಾರಿಗಳನ್ನು ಆದ್ಯತೆಯಲ್ಲಿ ಮುಗಿಸಬೇಕು. ಆದರೆ ಗುತ್ತಿಗೆ ಕಂಪೆನಿ ಅರ್ಧಂಬರ್ಧ ರಸ್ತೆ ನಿರ್ಮಿಸಿ ತಲಪಾಡಿಯಲ್ಲಿ ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿದೆ. ಪಂಪ್ ವೆಲ್, ತೊಕ್ಕುಟ್ಟು ಮೇಲ್ಸೇತುವೆ ಕಾಮಗಾರಿ ಪೂರ್ಣವಾಗಿ ನಿಲ್ಲಿಸಲಾಗಿದೆ. ಇಂತಹ ನಿಯಮಗಳ ಉಲ್ಲಂಘನೆಗಳು ನಿರ್ಲಜ್ಜವಾಗಿ ನಡೆಯುತ್ತಿದ್ದರು ಸಮಸ್ಯೆ ಬಗೆಹರಿಸಬೇಕಾದ ಜನಪ್ರತಿನಿಧಿಗಳು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಗುತ್ತಿಗೆ ಕಂಪೆನಿಯ ಆಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಡಿವೈಎಫ್ಐ ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕರು ಆ.5 ರಂದು ನಡೆಯಲಿರುವ ಮಹತ್ವದ ಹೋರಾಟದಲ್ಲಿ ಭಾಗವಹಿಸುವ ಮೂಲಕ ಹೆದ್ದಾರಿಯ ಗಂಭೀರ ಸಮಸ್ಯೆಯನ್ನು ನಿರ್ಣಾಯಕವಾಗಿ ಬಗೆಹರಿಸಲು ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ.
ಕೆ.ಸಿ ರೋಡ್ ಡಿವೈಎಫ್ಐ ಮುಖಂಡರಾದ ಅಶ್ರಫ್ ಮಂಜ್ರಾಬಾದ್, ಕಾರ್ಮಿಕ ಮುಖಂಡ ನಾರಾಯಣ ತಲಪಾಡಿ, ಪಂಜಳ ಮಸೀದಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್, ಸಾಮಾಜಿಕ ಮುಖಂಡರಾದ ಮುನ್ನೂರು ಮೂಸಬ್ಬ, ಅಬ್ದುಲ್ಲ ಕೈರಂಗಳ, ಹಮೀದ್ ಉಚ್ಚಿಲ್ ಕೆ.ಸಿ ನಗರ, ಮೊಹಿದ್ದಿನ್ ಉಚ್ಚಿಲ್ ಮುಂತಾದವರು ಉಪಸ್ಥಿತಿರಿದ್ದರು.


