UN NETWORKS
ಕೊಣಾಜೆ: : ರಾಜ್ಯದಲ್ಲೇ ಸ್ಕೌಟಿಂಗ್ ಗೈಡಿಂಗ್ ಚಟುವಟಿಕೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯು ಸತತವಾಗಿ ಉತ್ತಮ ಜಿಲ್ಲೆಗೆ ಕೊಡಮಾಡುವ ಅಬ್ದುಲ್ ಗಫಾರ್ ಪಾರಿತೋಷಕವನ್ನು ಪಡೆಯುವಲ್ಲಿ ಎಲ್ಲರ ಶ್ರಮ ಮತ್ತು ಉತ್ಸಾಹದ ಜತೆಗೆ ಅವಿರತ ಪ್ರಯತ್ನವೇ ಕಾರಣ ಎಂದು ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಡಾ| ಎನ್. ಜಿ. ಮೋಹನ್ ಅಭಿಪ್ರಾಯಪಟ್ಟರು.
ಕೊಣಾಜೆಯ ವಿಶ್ವಮಂಗಳ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಠೆಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದರು.ಜಿಲ್ಲೆ ಮತ್ತು ಉಳ್ಳಾಲ ಸಂಸ್ಥೆಯ ಉತ್ತಮವಾದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರು ಇನ್ನೂ ಹೆಚ್ಚೆಚ್ಚು ತೊಡಗಿಸಿಕೊಂಡು ಸಂಸ್ಥೆಯ ಕೀರ್ತಿ ಹೆಚ್ಚಿಸಿ ಎಂದರು.
ಜಿಲ್ಲಾ ಕಾರ್ಯದರ್ಶಿ ಯು.ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಜಿಲ್ಲಾ ಸಂಸ್ಥೆಯು ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಹಾಗೂ ರಾಜ್ಯ ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸಿದರು. ಅಲ್ಲದೇ ಚಿಂತನಾ ದಿನಾಚರಣೆಯನ್ನು ಎಲ್ಲಾ ಶಾಲೆಯಲ್ಲೂ ಹಮ್ಮಿಕೊಳ್ಳುವಂತೆ ಕರೆ ನೀಡಿದರು. ಮತ್ತ್ತೊಬ್ಬ ಅತಿಥಿ ಜಿಲ್ಲಾ ಸ್ಕೌಟ್ ಆಯುಕ್ತ ರಾಮಶೇಷ ಶೆಟ್ಟಿ ಅವರು ಮಾತನಾಡಿ ಮಕ್ಕಳು ಶಿಸ್ತು, ಸಂಯಮ, ಪರೋಪಕಾರ ಮೊದಲಾದ ಸದ್ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್‍ಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದರು. ರಾಷ್ಟ್ರವನ್ನು ಸುಭದ್ರವಾಗಿ ಕಟ್ಟಬೇಕೆಂದರೆ ಸಂಘ ಸಂಸ್ಠೆಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಅದರಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಠೆಯು ಅತ್ಯಂತ ಉತ್ತಮ ಪಾತ್ರ ವಹಿಸುತ್ತಿದೆ. ರಾಷ್ಟ್ರಭಕ್ತಿ, ರಾಷ್ಟ್ರದ ಬಗೆಗಿನ ಕಾಳಜಿಯನ್ನು ಎಳವೆಯಲ್ಲೇ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಹಾಗಾಗಿ ಎಲ್ಲಾ ಶಾಲೆಗಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ಕಡ್ಡಾಯವಾಗಿ ಮಾಡಬೇಕು. ಶಿಕ್ಷಕರು ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ ಮತ್ತು ಬುಲ್ ಬುಲ್ ದಳಗಳಿಗೆ ಮಕ್ಕಳು ಸೇರುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಕಜೆ ಅವರು ಕಳೆದ ಸಾಲಿನಲ್ಲಿ ಸಂಸ್ಥೆಯು ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಸಹಕರಿಸಿದ ಎಲ್ಲಾ ಪದಾಧಿಕಾರಿಗಳನ್ನು ಸ್ಕೌಟರ್ ಗೈಡರ್‍ಗಳನ್ನು ಹಾಗೂ ಮಕ್ಕಳನ್ನು ಅಭಿನಂದಿಸಿ ಈ ವರ್ಷದ ಕಾರ್ಯಕ್ರಮಗಳಿಗೂ ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್, ವಿಶ್ವಮಂಗಳ ಶಾಲಾ ಮುಖ್ಯ ಶಿಕ್ಷಕಿ ಪ್ರಿಯಾ, ಸ್ಥಳೀಯ ಸಂಸ್ಠೆಯ ಉಪಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ಜಿಲ್ಲಾ ಸಹಾಯಕ ಆಯುಕ್ತ ಎಂ.ಹೆಚ್.ಮಲಾರ್, ಜಿಲ್ಲಾ ಸಂಸ್ಠೆಯ ಕೋಶಾಧಿಕಾರಿ ವಾಸುದೇವ ಬೋಳೂರು, ಜಿಲ್ಲಾ ಸಂಘಟಕ ಭರತ್ ರಾಜ್ ಉಪಸ್ಥಿತರಿದ್ದರು.ಗೈಡರ್ ಗೀತಾ ಜುಡಿತ್ ಸಲ್ದಾನ ಸ್ವಾಗತಿಸಿದರು. ಸಂಸ್ಠೆಯ ಕಾರ್ಯದರ್ಶಿ ಸ್ಕೌಟರ್ ಅಬ್ದುಲ್ ಮಝೀದ್ 2017-18 ರ ಸಾಲಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ವರದಿ ವಾಚಿಸಿದರು. ಕೋಶಾಧಿಕಾರಿ ಸ್ಕೌಟರ್ ಜಗದೀಶ್ ಶೆಟ್ಟಿ ಅವರು ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಗೈಡರ್ ಜಯವಂತಿ ಸೋನ್ಸ್ ವಂದಿಸಿದರು. ಸ್ಕೌಟರ್ ತ್ಯಾಗಂ ಹರೇಕಳ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಬೇರೆ ಬೇರೆ ಪರೀಕ್ಷೆಗಳಲ್ಲಿ ಸಾಧನೆಗೈದ ಸ್ಕೌಟ್ಸ್ ಮತ್ತು ಗೈಡ್ಸ್‍ಗಳನ್ನು ಹಾಗೂ ಸಂಸ್ಠೆಯು ಕಳೆದ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ವಿವಿಧ ಸಂಸ್ಠೆಗಳನ್ನು ಗೌರವಿಸಲಾಯಿತು.


