UN NETWORKS
ಕೋಟೆಕಾರು : ಭಾರೀ ಮಳೆಗೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಮಾಡೂರು ಶ್ರೀ ಪಾಡಂಗರ ಭಗವತಿ ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆಯಿಡೀ ಜಲಾವೃತಗೊಂಡು ಸುಮಾರು 150 ಮನೆಮಂದಿಗೆ ಅತಂತ್ರ ಸ್ಥಿತಿ ಮಂಗಳವಾರ ನಿರ್ಮಾಣವಾಯಿತು.
ಒಂದು ಕಿ.ಮೀ ಉದ್ದದ ರಸ್ತೆಯಿಡೀ ಜಲಾವೃತಗೊಂಡು ಮೊಣಕಾಲುವರೆಗೆ ನೀರು ತುಂಬಿದೆ. ಪರಿಣಾಮ ಆ ರಸ್ತೆಯಲ್ಲಿ ತೆರಳುವ ವಾಹನಗಳು ತೆರಳಲು ಸಾಧ್ಯವಾಗದೆ, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ , ಉದ್ಯೋಗಿಗಳು ಕೆಲಸ ಕಾರ್ಯಗಳಿಗೆ ತೆರಳಲು ಸಾಧ್ಯವಾಗದೆ ಮನೆಯಲ್ಲೇ ಉಳಿಯುವಂತಾಯಿತು. ಸುಮಾರು 50 ಮನೆಗಳ ಮೆಟ್ಟಿಲುವರೆಗೆ ನೀರು ತುಂಬಿದ್ದು, ಇನ್ನೊಂದು ದಿನ ಮಳೆಯಾದರೆ ಮನೆಯೊಳಗೆ ನೀರು ನುಗ್ಗುವ ಆತಂಕದಲ್ಲಿ ಜನರಿದ್ದಾರೆ.
ಅವೈಜ್ಞಾನಿಕ ಕಿಂಡಿಅಣೆಕಟ್ಟು : 2017-18 ನೇ ಸಾಲಿನಲ್ಲಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರ ಕೈಗೊಂಡ ಯೋಜನೆಯಂತೆ, ಜಿಲ್ಲಾ ಪಂಚಾಯಿತಿ ಅನುದಾನದಡಿ ಈ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಅದು ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವುದರಿಂದ ಸಮಸ್ಯೆ ಉದ್ಭವಿಸಿದೆ ಅನ್ನುವುದು ಸ್ಥಳೀಯರ ಆರೋಪ. ಕಿರಿದಾದ ಕಿಂಡಿ ಅಣೆಕಟ್ಟು ದೊಡ್ಡ ಪ್ರಮಾಣದಲ್ಲಿ ಹರಿಯುವ ನೀರನ್ನು ತಡೆಯಲು ಸಾಧ್ಯವಾಗದೆ, ಅದು ತೋಡಿನಲ್ಲಿ ಸಾಗುವ ಬದಲು ರಸ್ತೆಯಲ್ಲಿ ಹರಿದು ಸಮಸ್ಯೆ ನಿರ್ಮಾಣವಾಗಿದೆ. ಈ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯಿತಿಗೆ ಮಳೆ ಆರಂಭವಾದಾಗಿನಿಂದ ಮನವಿ ಮಾಡುತ್ತಲೇ ಬಂದಿದ್ದರೂ, ಈವರೆಗೆ ಪ್ರತಿಕ್ರಿಯೆ ದೊರೆತಿಲ್ಲ.
ಪಂಚಾಯಿತಿಗೆ ಮುತ್ತಿಗೆ : ಕೋಟೆಕಾರು ಸಮೀಪ ಜಲಾವೃತಗೊಂಡ ಮನೆಮಂದಿ , ಮಹಿಳೆಯರು ಸೇರಿದಂತೆ ಪಂಚಾಯಿತಿ ಕೌನ್ಸಿಲರ್ ಒಟ್ಟಾಗಿ ಕೋಟೆಕಾರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ದೂರು ನೀಡಿದರೂ ಸ್ಪಂಧಿಸದೆ ಬೇಜವಾಬ್ದಾರಿ ನೀತಿ ಅನುಸರಿಸಿದ್ದೀರಿ. ಮನೆಯೊಳಗೆ ನೀರು ಬಂದಲ್ಲಿ ಪಂಚಾಯಿತಿಯೇ ನೇರ ಹೊಣೆಯಾಗುತ್ತದೆ. ಎರಡು ದಿನಗಳೊಳಗೆ ಸರಿಪಡಿಸದೇ ಇದ್ದಲ್ಲಿ ಹೆಚ್ಚು ಜನ ಸೇರಿ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತಾತ್ಕಾಲಿಕವಾಗಿ ಮರಳು ತುಂಬಿದ ಗೋಣಿ ಚೀಲಗಳನ್ನು ಅಡ್ಡಯಿಟ್ಟು, ರಸ್ತೆಗೆ ನೀರು ಹರಿಯದಂತೆ ನೋಡುತ್ತೇವೆ. ಆದರೆ ನೀರು ಖಾಲಿಯಾದ ನಂತರವಷ್ಟೇ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕೋಟೆಕಾರು ಪಟ್ಟಣ ಪಂಚಾಯಿತಿಗೆ ತೆರಳಿದವರಲ್ಲಿ ಸೂರಜ್, ಪ್ರದೀಪ್, ಸತೀಶ್, ಯಾದವ, ಕೌನ್ಸಿಲರ್ ಜಯಶ್ರೀ ಪ್ರಫುಲ್ಲಾದಾಸ್, ಶೇಖರ್ ಕನೀರುತೋಟ, ಮೋಹನರಾಜ್ ಕನೀರುತೋಟ ಮೊದಲಾದವರು ಉಪಸ್ಥಿತರಿದ್ದರು.
`ಒಡೆದರೆ ಮಾತ್ರ ಪರಿಹಾರ’
ಕಿಂಡಿ ಅಣೆಕಟ್ಟು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಸಮಸ್ಯೆ ನಿರ್ಮಾಣವಾಗಿದೆ. ಮಳೆ ಬರುವ ಮುನ್ನವೇ ಹೂಳೆತ್ತುವ ಪ್ರಕ್ರಿಯೆಗೆ ಪಂ. ಆಡಳಿತ ಮುಂದಾಗುತ್ತಿದ್ದರೆ ತೊಂದರೆಯಾಗುತ್ತಿರಲಿಲ್ಲ. ಒಂದು ಭಾಗದಲ್ಲಿ ಮಾತ್ರ ಹೂಳೆತ್ತಲಾಗಿದ್ದು, ಇನ್ನೊಂದು ಭಾಗವನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ಕಸ ಕಡ್ಡಿಗಳು ಅಣೆಕಟ್ಟಿನಲ್ಲಿ ನಿಂತು, ನೀರು ಹೊರಚೆಲ್ಲುವಂತಾಗಿದೆ. ತಾತ್ಕಾಲಿಕ ಪರಿಹಾರವಾಗಿ ಮರಳು ತುಂಬಿದ ಗೋಣಿಚೀಲ ಇರಿಸುವ ಭರವಸೆ ನೀಡಿದ್ದಾರೆ. ಆದರೆ ಇದರಿಂದ ಸಮಸ್ಯೆ ಪರಿಹಾರವಾಗಲು ಸಾಧ್ಯವಿಲ್ಲ. ಅಣೆಕಟ್ಟಿನಲ್ಲಿ ಇರುವ ತಡೆಯನ್ನು ಒಡೆದರೆ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ನಡುವೆ ದುರಸ್ತಿ ಕಾರ್ಯಕ್ಕೂ ಪಂಚಾಯಿತಿನಲ್ಲಿ ಅನುದಾನವಿಲ್ಲ ಅನ್ನುತ್ತಿದ್ದಾರೆ. ಇದು ಪ್ರದೇಶದವರನ್ನು ಇನ್ನಷ್ಟು ಆತಂಕಕ್ಕೆ ಒಳಪಡಿಸಿದೆ.
ಸುನಿಲ್
ತೊಂದರೆಗೊಳಗಾದ ಗ್ರಾಮಸ್ಥ


