UN NETWORKS
ಉಳ್ಳಾಲ: ಸ್ವಚ್ಛ ಸರ್ವೇಕ್ಷಣ 2018ರ ಸಮೀಕ್ಷಯೆಡಿ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆ ರಾಜ್ಯಕ್ಕೆ 250 ಸ್ಥಳೀಯ ಸಂಸ್ಥೆಗಳ ಪೈಕಿ ನಾಲ್ಕನೇ ರ್ಯಾಂಕ್ ಹಾಗೂ ಜಿಲ್ಲೆಯಲ್ಲಿ ಮೊದಲನೇ ರ್ಯಾಂಕ್ ಪಡೆದಿದೆ.
ಈ ಮೂಲಕ ದಕ್ಷಿಣ ಭಾರತ (ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ, ಪಾಂಡಿಚೇರಿ ರಾಜ್ಯಗಳ) ವಿಭಾಗದಲ್ಲಿ 1113 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆ 10ನೇ ರ್ಯಾಂಕ್ ಪಡೆದಿದೆ.
ಜ.22 ರಿಂದ 25ರವರೆಗೆ ಸರ್ವೇಕ್ಷಣ 2018ರ ಮಾರ್ಗಸೂಚಿಯಂತೆ 2017-18 ನೇ ಸಾಲಿನ ದಾಖಲಾತಿ ಕ್ರೋಢೀಕರಿಸಿ ಕೇಂದ್ರ ಸರಕಾರದಿಂದ ನೇಮಿಸಿದ ತಂಡದಿಂದ ಒಟ್ಟು 3 ಹಂತದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿತ್ತು. ಅದರಲ್ಲಿ ನಗರದ ಸ್ವಚ್ಛತೆ, ಸೇವಾ ಹಂತದ ಪ್ರಗತಿ, ಸ್ವತಂತ್ರ್ಯ ಮೌಲ್ಯಮಾಪನ, ಪ್ರತ್ಯಕ್ಷ ನೇರ ವೀಕ್ಷಣೆ ಹಾಗೂ ಸಾರ್ವಜನಿಕರ ಅಭಿಪ್ರಾಯಗಳ ಸಮೀಕ್ಷೆ ನಡೆದಿತ್ತು.
ಸಮೀಕ್ಷೆ ಕಾರ್ಯದಲ್ಲಿ ಸಹಕಾರ ನೀಡಿದ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಹೊಟೇಲ್ ಹಾಗೂ ಸ್ವಸಹಾಯ ಗುಂಪುಗಳು ತಮ್ಮ ನಗರ ಉತ್ತಮ ಶ್ರೇಣಿಯಲ್ಲಿ ಬರುವಂತೆ ಸಹಕಾರ ನೀಡಿತ್ತು.


