UN NETWORKS
ಸುಳ್ಯ : ಮಳೆ ಬಂತೆಂದರೆ ಬಹುತೇಕ ಜಲಪಾತಗಳು ಮೈತುಂಬಿ ಹರಿಯುತ್ತದೆ. ಇದೇ ರೀತಿಯಲ್ಲಿ ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದಲ್ಲಿನ ಚಾಮಡ್ಕ ಜಲಪಾತವೂ ಮೈತುಂಬಿ ಹರಿಯಲು ಆರಂಭಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಿಚಿತ್ರವೆಂದರೆ ಬೇರೆ ಕಡೆಗಳಲ್ಲಿ ಎಲ್ಲಿಯೂ ಕಾಣದ ರೀತಿಯ ಚಾಮಡ್ಕ ಜಲಪಾತದ ನೀರು ಪಶ್ಚಿಮ ದಿಕ್ಕಿನಿಂದ ಪೂರ್ವ ಧಿಕ್ಕಿಗೆ ಹರಿಯುತ್ತದೆ.
ಬಂಟಮಲೆಯಲ್ಲಿ ಹುಟ್ಟುವ ಜಲಪಾತ ಕಂದಡ್ಕದ ಕುಟೇಲಿನಲ್ಲಿ ಪಯಸ್ವಿನಿ ನದಿ ಸೇರುತ್ತದೆ. ಸೇತುವೆ ಕೆಳಭಾಗದಲ್ಲಿ ಹರಿದು ಬರುವ ನೀರು ಎತ್ತರದಿಂದ ಕೆಳಗೆ ಬೀಳುವುದು ಮೈನವಿರೇಳಿಸುವಂತಹದ್ದು. ಅದರ ಕಳಗೆ ನಿಂತಲ್ಲಿ ನೀರಿನ ಏಟು ತಡೆಯಲಾಗದ ಸ್ಥಿತಿ. ಅಲ್ಲಿಂದ ಕೆಳಬೀಳುವ ನೀರು ಮೂರು ತೊರೆಗಳಾಗಿ ಹರಿಯುತ್ತಾ ಹೋಗುವುದರಿಂದ ಅಪಾಯಕಾರಿಯೂ ಆಗಿರುವುದಿಲ್ಲ. ಮೇಲ್ನೋಟಕ್ಕೆ ನೀರಿನ ಪ್ರವಾಹವೇ ಕಾಣಿಸಿದರೂ ಕೆಳಗೆ ಹೋಗಿ ನಿಂತಾಗ ಅದರ ಸೊಬಗು ಖುಷಿ ಕೊಡುತ್ತದೆ.
ಹೋಗುವ ದಾರಿ : ಸುಳ್ಯ ತಾಲೂಕಿನಿಂದ 13 ಕಿ.ಮೀ ದೂರದಲ್ಲಿರುವ ಜಲಪಾತಕ್ಕೆ ಹೋಗಲು ಸುಗಮವಾದ ದಾರಿಯಿದೆ. ಕಾಡು ಬದಿಯ ಮಾರ್ಗದಲ್ಲೇ ಬಸ್ಸು ಅಥವಾ ಸ್ವಂತ ವಾಹನದಲ್ಲಿ ಕುಕ್ಕುಜಡ್ಕ ಮಾರ್ಗವಾಗಿ ಕಲ್ಮಡ್ಕ ರಸ್ತೆಯ ಮೂಲಕ ಪ್ರಯಾಣ ಮುಂದುವರಿಸಿದಾಗ ಡಿ.ಆರ್.ಜಿ ವೃತ್ತದಲ್ಲಿ ಬಲಬದಿಯಾಗಿ ಅರ್ಧ ಕಿ.ಮೀ ಕ್ರಮಿಸುವಷ್ಟರಲ್ಲಿ ಭೋರ್ಗರೆಯುವ ಜಲಪಾತದ ಸೊಬಗು ಕಾಣುತ್ತದೆ. ಸೇತುವೆ ಬದಿಯಲ್ಲೇ ವಾಹನ ನಿಲ್ಲಿಸಿ ನಡೆದುಕೊಂಡು ಓಡಿಯಪ್ಪ ನಾಯ್ಕ್ ಎಂಬವರ ಮನೆ ಎದುರಿನಿಂದ ಕಾಲುದಾರಿಯಲ್ಲಿ ಕೆಳಗೆ ಇಳಿದರೆ ಜಲಪಾತದ ಸ್ಥಳಕ್ಕೆ ತಲುಪಲು ಸಾಧ್ಯ. ಫಿಲ್ಮ್ , ಜಾಹೀರಾತು ಶೂಟಿಂಗ್ ನಡೆದ ಸ್ಥಳ: ಇನ್ನಷ್ಟೇ ತೆರೆಕಾಣಲಿರುವ ಮಕ್ಕಳ ಚಿತ್ರ ಸೇರಿದಂತೆ ಹಲವು ಕಿರುಚಿತ್ರಗಳು ಜಲಪಾತದ ಸೊಬಗಿನಡಿ ಚಿತ್ರೀಕರಣಗೊಂಡಿದೆ. ನೀರಿನ ಹರಿವಿನಿಂದ ನೊರೆಯೇ ಹೆಚ್ಚಾಗಿ ಕಾಣಿಸುವುದರಿಂದ ಸೋಪುಗಳ ಜಾಹೀರಾತಿನವರು ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರೀಕರಣ ನಡೆಸಿರುವಂತಹ ಸ್ಥಳ ಇದಾಗಿದೆ. ವಾರದ ಕೊನೆಯ ದಿನ ಮತ್ತು ಶನಿವಾರದಂದು ವಿದ್ಯಾರ್ಥಿಗಳು ಫೋಟೊ ಸೂಟಿಗೆಂದೇ ಇಲ್ಲಿ ಬರುತ್ತಿರುತ್ತಾರೆ.
ಪೊಲೀಸ್ ಕಣ್ಗಾವಲು : ಸ್ಥಳದಲ್ಲಿ ಕೆಲ ವರ್ಷದ ಹಿಂದೆ ಪ್ರವಾಸಿಗರ ನಡುವೆಯೇ ಗಲಾಟೆ ನಡೆದಿತ್ತು. ಆನಂತರ ಪೊಲೀಸರು ಜಲಪಾತದ ಕಡೆಗೆ ಕಣ್ಗಾವಲು ಇರಿಸಲು ಆರಂಭಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಅಮಲು ಪದಾರ್ಥ ಸೇವಿಸದಂತೆಯೂ , ಅಲ್ಲದೆ ಸ್ವಚ್ಛತೆಯನ್ನು ಕಾಪಾಡುವ ಕುರಿತು ಹೆಚ್ಚಿನ ಗಮನ ಹರಿಸುವ ಕುರಿತು ಸ್ಥಳೀಯ ಪಂಚಾಯತ್ ಮತ್ತು ಪೊಲೀಸರ ಆದೇಶವಿದೆ.
ಸ್ಥಳೀಯರಿಗೂ ಸಹಕರಿಸಿ: ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿರುವ ಓಡಿಯಪ್ಪ ನಾಯ್ಕ್ ದಂಪತಿ, ಮೂವರು ಹೆಣ್ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಯೇ ಜವಾಬ್ದಾರಿ ಹೆಗಲ ಮೇಲಿದೆ. ಪ್ರತಿ ವರ್ಷವೂ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್ ಸಿಗುತ್ತಿದ್ದರೂ, ಈ ಬಾರಿ ಅದೂ ಸಿಕ್ಕಿಲ್ಲ. ಕಲಿಕೆಯಲ್ಲೂ ಮುಂದಿರುವ ಮಕ್ಕಳಲ್ಲಿ ಒಬ್ಬಾಕೆ ಯಕ್ಷಗಾನದ ಕಲಾವಿದೆಯೂ ಹೌದು. ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ಪ್ರದರ್ಶನವೊಂದರಲ್ಲಿ ಭಾಗವಹಿಸಿ ಕಾಲೇಜಿನಲ್ಲಿ ಸನ್ಮಾನ ಸ್ವೀಕರಿಸಿದ್ದಾಳೆ ಅನ್ನುತ್ತಾರೆ ಮನೆಮಂದಿ. ಜಲಪಾತದ ಬಳಿ ಇವರದ್ದೊಂದೇ ಮನೆಯಿದ್ದು, ಬರುವ ಪ್ರವಾಸಿಗರು ಮನೆಯ ಶೌಚಾಲಯ ಉಪಯೋಗಿಸಿ ವಾಪಸ್ಸಾಗುತ್ತಾರೆ. ಆದರೆ ತಾವು ಉಪಯೋಗಿಸಿದ ಸೊತ್ತುಗಳಿಗೆ ಬೆಲೆ ನೀಡಿದಲ್ಲಿ , ಮಕ್ಕಳ ಮುಂದಿನ ಶಿಕ್ಷಣಕ್ಕೆ ಅನುಕೂಲವಾದೀತು ಅನ್ನುವುದು ಪತ್ರಿಕೆ ಅಭಿಪ್ರಾಯ.


