UN NETWORKS
ತಲಪಾಡಿ: ದೇಶದಲ್ಲಿ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಗೆ ಗುರಿಯಾಗಿ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದ್ದು ಅದರ ಬಗ್ಗೆ ಜನರಲ್ಲಿ ಜಾಗೃತಿ ಅತೀ ಅಗತ್ಯ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಈ ರೋಗದ ಜಾಗೃತಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ ಎಂದು ಯೇನೆಪೋಯ ಮೆಡಿಕಲ್ ಕಾಲೇಜಿನ ಅಂಕೋಲಜಿ ವಿಭಾಗದ ಮುಖ್ಯಸ್ಥ ಡಾ| ಇಬ್ರಾಹಿಂ ನಾಗನೂರು ಅಭಿಪ್ರಾಯಪಟ್ಟರು.
ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ರೋಗದ ಕಾರಣಗಳು, ಗುಣಲಕ್ಷಣಗಳು ಮತ್ತು ಚಿಕಿತ್ಸೆಯ ಸವಿವರ ಮಾಹಿತಿಯನ್ನು ಯೆನಪೋಯ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಗಳಾದ ಡಾ| ರಚನಾ ಪ್ರಭು, ಡಾ| ಪ್ರಜ್ಞಾ ಕಿಣಿ ಮತ್ತು ಡಾ| ಇಮ್ರಾನ್ ಪಾಶ ವಿದ್ಯಾರ್ಥಿಗಳಿಗೆ ನೀಡಿದರು ಮತ್ತು ಈ ರೋಗದ ಬಗೆಗಿನ ವಿದ್ಯಾರ್ಥಿಗಳ ಸಂದೇಹವನ್ನು ಪರಿಹರಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನಕರ್, ಉಪಪ್ರಾಂಶುಪಾಲ ಮೋಹನ್‍ದಾಸ್ ಮತ್ತು ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಶಿಕ್ಷಕಿ ಆಶಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗುರುರಾಜ್ ವಂದಿಸಿದರು.


