UN NETWORKS
ಕೈರಂಗಳ: ಸಹಪಠ್ಯ ಚಟುವಟಿಕೆಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಹಕಾರಿ ಎಂದು ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ ರಾಜಾರಾಮ ಭಟ್ ಅಭಿಪ್ರಾಯಪಟ್ಟರು.
ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಸಹಪಠ್ಯ ಚಟುವಟಿಕೆ ತರಗತಿಗಳ ಉದ್ಘಾಟಿಸಿ ಮಾತನಾಡಿದ ಅವರು ಸಹಪಠ್ಯ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ವಿಕಾಸಕ್ಕೆ ಎಡೆ ಮಾಡಿಕೊಡುತ್ತವೆ. ಈ ವ್ಯವಸ್ಥೆಯ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು ಎಂದು ನುಡಿದರು.
ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಶಾಲಾ ಮಾರ್ಗದರ್ಶಕ ಪಿ. ಶಂಕರಭಟ್ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ವಾಸುದೇವ ಕೊಣಾಜೆ ಲಲಿತ ಕಲೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ತರಬೇತುದಾರರಾದ ಉಪೇಂದ್ರ, ವೀಣಾಸರಸ್ವತಿ, ದಿನೇಶ್ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ದಿವ್ಯದೀಪ ಸ್ವಾಗತಿಸಿದರು. ಸಹಶಿಕ್ಷಕ ಶ್ರೀಹರಿ ಕೆ.ವಿ. ಪ್ರಸ್ತಾವನೆಗೈದರು. ಉಪಪ್ರಾಂಶುಪಾಲ ಎಂ. ಸೋಮಶೇಖರ ವಂದಿಸಿದರು. ಸಹಶಿಕ್ಷಕಿ ಯೋಗಿತಾ ಕಾರ್ಯಕ್ರಮ ನಿರೂಪಿಸಿದರು.


