UN NETWORKS
ಉಳ್ಳಾಲ: ಉಳ್ಳಾಲ ಭಾಗದಲ್ಲಿ ಜಾತ್ಯಾತೀತ ಜನತಾ ದಳದ ಅಭ್ಯರ್ಥಿ ನಿರಂತರವಾಗಿ ಸ್ಪರ್ಧಿಸುತ್ತಿದ್ದರೂ ಈ ಬಾರಿ ಸಮರ್ಥ ನಾಯಕ, ಶಾಂತಿ ಸಾಮರಸ್ಯವನ್ನು ಬಯಸುವ ಅಭ್ಯರ್ಥಿಗೆ ಮತಯಾಚನೆ ವೇಳೆ ಸಿಕ್ಕಂತಹ ಅಭೂತಪೂರ್ವ ಬೆಂಬಲದಿಂದ ಗೆಲುವು ನಿಶ್ಚಿತ ಎಂದು ಜಾತ್ಯಾತೀತ ಜನತಾದಳದ ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಹೇಳಿದರು.
ಉಳ್ಳಾಲ ಮಾಸ್ತಿಕಟ್ಟೆಯ ಚುನಾವಣಾ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಜನತೆ ನಾಯಕತ್ವ ಗುರುತಿಸಿ ಬಹುಮತದಿಂದ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಕ್ಷೇತ್ರದ ಶಾಂತಿ, ಸಾಮರಸ್ಯ ಬಯಸುವವರು ಅಶ್ರಫ್ ಅವರನ್ನು ಬೆಂಬಲಿಸಬೇಕಿದೆ. ಅನ್ಯಾಯದ ವಿರುದ್ಧ ನಿರಂತರ ಹೋರಾಟಗಳ ಮೂಲಕ ಸಮರ್ಥ ನಾಯಕ ಅನಿಸಿಕೊಂಡವರಿಗೆ ಈ ಬಾರಿ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ಸಿಗಲಿದೆ ಎಂದರು.
ಮುಖಂಡ ಝಾಕಿರ್ ಹುಸೈನ್ ಉಳ್ಳಾಲ್ ಮಾತನಾಡಿ ಜಾತಿ-ಧರ್ಮಗಳ ನಡುವೆ ಕಲಹ ನಡೆಸಿರುವುದು ಮಂಗಳೂರು ಕ್ಷೇತ್ರದ ಶಾಸಕರ ಸಾಧನೆ. ಮಹಿಳಾ ಮತದಾರರು ಹೆಚ್ಚಾಗಿ ತೊಂದರೆಗೀಡಾಗಿದ್ದು, ಸರಕಾರಿ ಕಾಲೇಜುಗಳಿಲ್ಲದೆ ಇರುವುದರಿಂದ ಹೆಣ್ಮಕ್ಕಳಿಗೆ ತೊಂದರೆ ಅಗಿದೆ. ಜೆಡಿಎಸ್‍ಗೆ ಮತಹಾಕಿದರೆ ಬಿಜೆಪಿ ಬರುತ್ತದೆ ಎಂದು ಗುಮ್ಮನನ್ನು ಸದಾ ಕಾಲ ತೋರಿಸಿ ಹೆದರಿಸುವ ಪರಿಪಾಠ ಕಾಂಗ್ರೆಸ್ ಮುಂದುವರಿಸಿದ್ದು ವಾಸ್ತವದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಜನತೆ ಈ ಬಾರಿ ಮತಗಳ ಮೂಲಕ ಉತ್ತರಿಸಲಿದ್ದಾರೆ ಎಂದರು.
ಪಿಯುಸಿಎಲ್ ಕಾರ್ಯಕರ್ತ ಕಬೀರ್ ಉಳ್ಳಾಲ್ ಮಾತನಾಡಿ ಸಚಿವ ಯು.ಟಿ. ಖಾದರ್ ಅವರು 900ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಹೇಳುತ್ತಾ ತಿರುಗುತ್ತಿದ್ದು ಅದರಲ್ಲಿ ಅವರು ವಿದೇಶದಲ್ಲಿ ಕಟ್ಟಿರುವ ಆಸ್ಪತ್ರೆÀಗೂ ಹಣ ಸಂದಾಯ ವಾಗಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಬೋಳಿಯಾರಿನಲ್ಲಿ ಮನೆ ನಿವೇಶನಕ್ಕೆ ಹಕ್ಕುಪತ್ರ ಮಂಜೂರಾಗಿದ್ದರೂ ಅದನ್ನು ತನ್ನ ತಂದೆಯ ಸ್ವಾಧೀನಕ್ಕೆ ಸೇರಿದೆ ಎಂದು ಅದನ್ನು ಖಾಸಗಿ ಕಾಲೇಜಿನ ಫುಟ್ಬಾಲ್ ಕ್ರೀಡಾಂಗಣಕ್ಕೆ ಹಸ್ತಾಂತರಿಸುವ ಸಲುವಾಗಿ ಕೇಸ್ ಫೈಲ್ ಮಾಡಿದ್ದಾರೆ. ಉಳ್ಳಾಲ ನಗರಸಭೆಯ ವ್ಯಾಪ್ತಿಯಲ್ಲಿ ಒಳಚರಂಡಿಗಾಗಿ 66ಕೋಟಿ ರೂ. ಅನುದಾನದಲ್ಲಿ ಅಸಸಮರ್ಪಕ ಕಾಮಗಾರಿಯ ಫಲ ಮಳೆ ನೀರು ಹರಿಯುವ ಚರಂಡಿಯಲ್ಲಿ ಡ್ರೈನೇಜ್ ನೀರು ಹರಿಯುತ್ತಿದೆ. ಸಚಿವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಫಿಸಿದ ಅವರು ಆ ಕುರಿತು ಕೇಂದ್ರಕ್ಕೆ ಪತ್ರ ಬರೆದಿದ್ದು ಅದಕ್ಕೆ ಸ್ಪಂದನೆ ದೊರೆತಿದ್ದು ಶೀಘ್ರವೇ ತನಿಖೆ ನಡೆಯುವ ಭರವಸೆ ಸಿಕ್ಕಿದೆ ಎಂದರು.
ಮುಖಂಡರಾದ ಅಜೀಝ್ ಮಲಾರ್, ಫಾರೂಕ್ ಯು.ಎಚ್, ಎಚ್. ಶಾಲಿ ಹಾಗೂ ಸೂಫಿಕುಂಞ ಉಪಸ್ಥಿತರಿದ್ದರು.


