UN NETWORKS
ತೊಕ್ಕೊಟ್ಟು : ಮತಯಾಚನೆ ಸಂದರ್ಭ ಕ್ಷೇತ್ರದುದ್ದಕ್ಕೂ ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಕೇವಲ ಪ್ರಚಾರಕ್ಕೆ ಮಾತ್ರ ಶಾಸಕರು ಸೀಮಿತವಾಗಿದ್ದಾರೆ. ರೋಸಿಹೋಗಿರುವ ಮತದಾರರು ಬದಲಾವಣೆ ಬಯಸಿ ಬಿಜೆಪಿ ಅಭ್ಯರ್ಥಿಯನ್ನು ಜಯಗಳಿಸಲಿದ್ದಾರೆ ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.
ತೊಕ್ಕೊಟ್ಟು ಕಾಪಿಕಾಡಿನ ಚುನಾವಣಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು
ಕ್ಷೇತ್ರದಲ್ಲಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತು ನಿಂತಿವೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಿ ಕೊಡದೇ ಇರುವುದರಿಂದ ರಸ್ತೆ ಬದಿ ಉದ್ದಕ್ಕೂ ತ್ಯಾಜ್ಯದ ರಾಶಿಯಿದೆ. ಚರಂಡಿ ವ್ಯವಸ್ಥೆಯಿಲ್ಲದೆ ಅಲ್ಲಲ್ಲಿ ಕೊಳಚೆ ನೀರು ಇಕ್ಕಟ್ಟಾಗಿದೆ. ಇಂತಹ ಅವ್ಯವಸ್ಥೆಯಿಂದ ಜನರ ಆರೋಗ್ಯವೂ ಹದಗೆಟ್ಟಿರುವುದನ್ನು ಮತಯಾಚನೆ ಸಂದರ್ಭ ಕಣ್ಣಾರೆ ಕಂಡಿದ್ದೇವೆ. ತಾವು ಜಿಲ್ಲಾ ಪಂಚಾಯಿತಿ ಇದ್ದಂತಹ ಅವಧಿಯಲ್ಲಿ ಸದಸ್ಯರೆಲ್ಲರೂ ನಿರ್ಣಯ ಕೈಗೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ನಿರ್ಣಯ ಕೈಗೊಂಡಿದ್ದರೂ, ಶಾಸಕರು ಅದನ್ನು ತಡೆಹಿಡಿದು ಇಡೀ ಕ್ಷೇತ್ರದ ಜನತೆಗೆ ಕುಡಿಯುವ ನೀರಿನಿಂದ ವಂಚಿಸಿದ್ದಾರೆ ಎಂದರು.
ಸರಕಾರಿ ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳು ಇಲ್ಲ. ಅಗ್ನಿಶಾಮಕ ದಳದ ಘಟಕವೂ ಮರೀಚಿಕೆಯಾಗಿದೆ. ಪ್ರವಾಸೋದ್ಯಮದ ವಿಚಾರವೇ ಇಲ್ಲ. ಸಿಗಬೇಕಾದ ನಿವೇಶನ ರಹಿತರಿಗೆ ನಿವೇಶನವೇ ಸಿಕ್ಕಿಲ್ಲ. ಕಡಲ್ಕೊರೆತದ ಹೆಸರಿನಲ್ಲಿ ಸರಕಾರದ ಖಜಾನೆಯನ್ನು ಖಾಲಿ ಮಾಡಲಾಗಿದೆ. ಸಾಮರಸ್ಯ, ಗಲಭೆ, ದಳ್ಳುರಿಗೆ ಸಿಲುಕಿರುವ ಉಳ್ಳಾಲದಲ್ಲಿ ಶಾಸಕರ ಅಭಯದಿಂದ ಅಪರಾಧಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ನಿರಪರಾಧಿಗಳು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಬಿಜೆಪಿ ಗೆದ್ದು ಬಂದಲ್ಲಿ ಕೇಂದ್ರ ಸರಕಾರದ ಬಲದಿಂದ ಕಡಲ್ಕೊರೆತ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಖಚಿತ ಎಂದರು.
ನಕಲಿ ಮತದಾನ ಕಾನೂನು ಕ್ರಮ
ಬಿಜೆಪಿ ಚುನಾವಣಾ ಸಂಚಾಲಕ ಸತೀಶ್ ಕುಂಪಲ ಮಾತನಾಡಿ ಹಾಸ್ಟೆಲಿನಲ್ಲಿರುವ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ನೀಡಿ ನಕಲಿ ಮತದಾನ ಮಾಡುವ ಮುನ್ಸೂಚನೆ ಇದೆ. ಒಂದು ವೇಳೆ ವಿದ್ಯಾರ್ಥಿಗಳು ಮತದಾನದಲ್ಲಿ ಪಾಲ್ಗೊಂಡಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು. ಉಳ್ಳಾಲ ಭಾಗದಲ್ಲಿ ಬಿಜೆಪಿ ಮುಖಂಡರಲ್ಲಿ ಯಾವುದೇ ಒಡಕಿಲ್ಲ. ಒಗ್ಗಟ್ಟಾಗಿ ದುಡಿಯುತ್ತಿದ್ದೇವೆ. ಈ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ಸಿಗರನ್ನು ನಂಬದಿರಿ. ಹಲವು ಕಾಂಗ್ರೆಸ್ ಮುಖಂಡರೇ ತಮ್ಮ ಶಾಸಕರ ದುರಾಡಳಿತವನ್ನು ಸಹಿಸದೆ ಗುಪ್ತವಾಗಿ ಬಿಜೆಪಿ ಜತೆಗೆ ಕೈಜೋಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಕ್ಷೇತ್ರದುದ್ದಕ್ಕೂ ಹಣದ ಹೊಳೆಯೇ ಬರುವುದರಿಂದ ಜನ ಜಾಗೃತರಾಗಬೇಕು ಎಂದರು.
ಈ ವೇಳೆ ಮುಖಂಡರುಗಳಾದ ನಿತಿನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ಕ್ಷೇತ್ರ ಕಾರ್ಯದರ್ಶಿ ಮೋಹನರಾಜ್ ಕೆ.ಅರ್, ಮನೋಜ್ ಆಚಾರ್ಯ, ಸುಜಿತ್ ಮಾಡೂರು, ಭರತ್ ಉಳ್ಳಾಲ್, ರಮಣಿ ಸೋಮೇಶ್ವರ, ಅಶ್ರಫ್ ಹರೇಕಳ, ಪ್ರೇಮಾನಂದ ರೈ ನೆತ್ತಿಲಕೋಡಿ, ದೇವಾನಂದ ಶೆಟ್ಟಿ ಹಾಗೂ ವಿಠಲ ಸಾಲಿಯಾನ್ ಉಪಸ್ಥಿತರಿದ್ದರು.


