UN NETWORKS
ತೊಕ್ಕೊಟ್ಟು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಪರ ಕೊಲ್ಯದಿಂದ ತೊಕ್ಕೊಟ್ಟುವರೆಗೆ ರೋಡ್ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರಿಂದ ಉಳ್ಳಾಲ ವ್ಯಾಪ್ತಿಯಲ್ಲಿ ಬಿಜೆಪಿ ಅಲೆ ಎದ್ದಿದೆ ಅನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂತು.
ಕೊಲ್ಯ ಸೌಭಾಗ್ಯಸಭಾ ಭವನದ ಎದುರುಗಡೆಯಿಂದ ತೊಕ್ಕೊಟ್ಟುವಿನ ಉಳ್ಳಾಲ ವೃತ್ತದವರೆಗೆ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಷೋ ನಡೆಸಿದರು. ಕೀಲು ಕುದುರೆ, ಗೊಂಬೆ ನೃತ್ಯ, ನಾಸಿಕ್ ಬ್ಯಾಂಡ್ ಸಹಿತ ಕಾರ್ಯಕರ್ತರು ಷಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ನಿಗದಿತ ಕಾಪಿಕಾಡಿನಿಂದ ತೊಕ್ಕೊಟ್ಟು ಕಲ್ಲಾಪುವರೆಗೆ ನಡೆಯಬೇಕಾಗಿದ್ದ ರೋಡ್ ಷೋ ಸಂಚಾರ ವ್ಯವಸ್ಥೆಗೆ ಅಡ್ಡಿಯುಂಟಾಗುವ ಉದ್ದೇಶದಿಂದ ಕೊಲ್ಯದಿಂದ ಆರಂಭಿಸಿ ತೊಕ್ಕೊಟ್ಟು ಉಳ್ಳಾಲ ವೃತ್ತದಲ್ಲಿ ಕೊನೆಗೊಳಿಸಲಾಯಿತು. ತೊಕ್ಕೊಟ್ಟು ಪಟ್ಟಣದಲ್ಲಿ ಸಾಗಬೇಕಾಗಿದ್ದ ರ್ಯಾಲಿ ತೊಕ್ಕೊಟ್ಟು ಪ್ರವೇಶಿಸಬೇಕಾದ ಉಳ್ಳಾಲ ವೃತ್ತದಲ್ಲೇ ಪೊಲೀಸರು ತಡೆಹಿಡಿದರಿಂದಾಗಿ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿತು.
ಛಾಯಚಿತ್ರ ತೆಗೆದ ಷಾ
ರಸ್ತೆಯಿಂದ ಛಾಯಚಿತ್ರಗಳನ್ನು ಸೆರೆಹಿಡಿಯುತ್ತಿದ್ದ ಮಾಧ್ಯಮ ಮಂದಿಯನ್ನು ತಮ್ಮ ರ್ಯಾಲಿಯ ವಾಹನದೊಳಕ್ಕೆ ಕರೆಸಿದ ಷಾ, ತನ್ನ ಬಳಿಯಿದ್ದ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕಾ ಛಾಯಾಗ್ರಾಹಕ ರಾಜೇಶ್ ಶೆಟ್ಟಿ ಬಳ್ಳಾಲ್ ಬಾಗ್ ಇವರ ಕ್ಯಾಮರ ಪಡೆದುಕೊಂಡು ತಾವೇ ಖುದ್ದಾಗಿ ರ್ಯಾಲಿಯಲ್ಲಿ ನೆರೆದ ಕಾರ್ಯಕರ್ತರ ಭಾವಚಿತ್ರಗಳನ್ನು ಕ್ಲಿಕ್ಕಿಸಿದರು. ಈ ವೇಳೆ ಕಾರ್ಯಕರ್ತರು ಷಾ ತೆಗೆಯುತ್ತಿದ್ದ ಛಾಯಚಿತ್ರಕ್ಕಾಗಿ ಮುಗಿಬಿದ್ದರು. ಬಳಿಕ ತಾವೇ ಸೆರೆಹಿಡಿದ ಛಾಯಚಿತ್ರವನ್ನು ತಾವೇ ಕ್ಯಾಮರಾ ಮೂಲಕ ನೋಡಿ ಖುಷಿಪಟ್ಟರು.


