ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಮಾಜಿ ಶಾಸಕ ಹಾಗೂ ಕವಿ ದಿ| ಇದಿನಬ್ಬ ಅವರ ಪುತ್ರನಿರುವ ಮನೆಗೆ ಶುಕ್ರವಾರ ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣವನ್ನು ದೋಚಿರುವ ಘಟನೆ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ನಡೆದಿದೆ.
ದಿ| ಇದಿನಬ್ಬ ಅವರ ಪುತ್ರ ಬದ್ರುದ್ದೀನ್ ಎಂಬವರು ಕುಟುಂಬ ಸಮೇತ ಸಮಾರಂಭವೊಂದಕ್ಕೆ ತೆರಳಿದ್ದರು. ರಾತ್ರಿ ಸುಮಾರು 10.30ರ ವೇಳೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಹಿಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಮನೆಯೊಳಗಿದ್ದ ರೂ.40,000 ನಗದು ಮತ್ತು ಸುಮಾರು 8.5 ಲಕ್ಷ ಬೆಲೆಯುಳ್ಳ ಚಿನ್ನಾಭರಣವನ್ನು ಕಳವುಗೈದಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳರು ಸಕ್ರಿಯ
ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಎರಡು ವಾರಗಳಲ್ಲಿ ಲಕ್ಷಾಂತರ ಸೊತ್ತುಗಳು ಕಳವಾದ ಪ್ರಕರಣ ಇದು ಎರಡನೆಯದ್ದಾಗಿದೆ. ಕೊಲ್ಯ ಸಮೀಪ ಸರಸ್ವತಿ ಎಂಬವರ ಮನೆಯಿಂದ ಲಕ್ಷಾಂತರ ಬೆಲೆಯುಳ್ಳ ಸಾಮಗ್ರಿಗಳನ್ನು ಕಳವು ನಡೆಸಿದ ಬಳಿಕ ಎರಡನೇ ವಾರದಲ್ಲಿ ಇದು ಎರಡನೇ ಕಳವಿನ ಪ್ರಕರಣವಾಗಿದೆ. ಇದರಿಂದ ಉಳ್ಳಾಲ ವ್ಯಾಪ್ತಿಯಲ್ಲಿ ಕಳ್ಳರು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಉರೂಸು ಸಮಾರಂಭಕ್ಕೆ ಹೊರಜಿಲ್ಲೆಗಳಿಂದ ಆಗಮಿಸುವ ಕಳ್ಳರು ಅಲ್ಲಿಯೂ ತಮ್ಮ ಕೈಚಳಕವನ್ನು ತೋರಿಸುತ್ತಿದ್ದು, ಉಳ್ಳಾಲ ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕೆಂದ ಆಗ್ರಹ ನಾಗರಿಕರದ್ದಾಗಿದೆ.







