UN NETWORKS
ತೊಕ್ಕೊಟ್ಟು: ಮಂಗಳೂರು ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ನಿರಂತರವಾಗಿ ಧ್ವನಿ ಎತ್ತಿದ ಸಿಪಿಎಂ ಯುವ ಅಭ್ಯರ್ಥಿಯನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದ್ದಾರೆ.
ಅವರು ತೊಕ್ಕೊಟ್ಟು ಒಳಪೇಟೆಯ ಸಿಪಿಎಂ ಕಚೇರಿಯಲ್ಲಿ ಬುಧವಾರ ನಡೆದ ಪ್ರಣಾಳಿಕೆ ಬಿಡುಗಡೆ ನಡೆಸಿ ಮಾತನಾಡಿದರು.
ಸಿಪಿಎಂ ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಾ ಬಂದಿದೆ. ಕುಡಿಯುವ ನೀರು, ರೇಷನ್ ಕಾರ್ಡು ಸಮಸ್ಯೆ, ಸರಕಾರಿ ಬಸ್, ಕಡಲ್ಕೊರೆತ ಪರಿಹಾರ, ಹಕ್ಕುಪತ್ರ ವಿಚಾರಗಳ ಕುರಿತು ಮಂಗಳೂರು ಕ್ಷೇತ್ರದಲ್ಲಿ ಜನಪರ ಹೋರಾಟ ನಡೆಸಿದೆ.
ಪ್ರಮುಖವಾಗಿ ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ , ಕಟ್ಟಡ ಕಾರ್ಮಿಕರ ಸವಲತ್ತುಗಳಿಗೆ ಹೋರಾಟವನ್ನು ನಡೆಸುತ್ತಲೇ ಇದೆ. ಕ್ಷೇತ್ರದಲ್ಲಿ ಒಂದು ಬಾರಿ ಬಿಜೆಪಿ ಮತ್ತು ಎರಡು ಬಾರಿ ಸಿಪಿಎಂ ಶಾಸಕರು ಆಳ್ವಿಕೆ ನಡೆಸಿದ್ದಾರೆ. ಆದರೆ ದಶಕಗಳ ಸಮಸ್ಯೆಯಾಗಿರುವ ಕುಡಿಯುವ ನೀರು ಪೂರೈಸಲು ಕಾಂಗ್ರೆಸ್ ಶಾಸಕರಿಗೆ ಈವರೆಗೆ ಸಾಧ್ಯವಾಗಿಲ್ಲ. ಮನೆ ನಿವೇಶನಕ್ಕೆ ಆರ್ಥಿಕ ಸಾಲ, ಸರಕಾರಿ ಜಾಗದಲ್ಲಿ ನಿರಾಶ್ರಿತರಿಗೆ ನಿವೇಶನವನ್ನಾಗಲಿ ನೀಡಿಲ್ಲ. ಈ ಬಾರಿ ಹಕ್ಕುಪತ್ರ ವಿತರಿಸಿರುವ ಸರಕಾರ ಬಡವರ ಕೈಯಿಂದ ರೂ. 10,050 ರಂತೆ ವಸೂಲಿ ಮಾಡಿರುವುದು ದುರಾದೃಷ್ಟ. ಸಮರ್ಥ, ನ್ಯಾಯಯುತ ಆಳ್ವಿಕೆಗೆ ಈ ಬಾರಿ ಜನತೆ ಸಿಪಿಎಂ ಪಕ್ಷದ ಯುವ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದರು.
ಜನಪರ ಪ್ರಣಾಳಿಕೆ :
ಮಂಗಳೂರು ಕ್ಷೇತ್ರ ಸಿಪಿಎಂ ಅಭ್ಯರ್ಥಿ ನಿತಿನ್ ಕುತ್ತಾರ್ ಮಾತನಾಡಿ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಿಪಿಐಎಂ ವತಿಯಿಂದ ಜನಪರ ಪ್ರಣಾಳಿಕೆಯನ್ನು ಸಿದ್ದ ಪಡಿಸಲಾಗಿದೆ. ಈ ಕ್ಷೇತ್ರದ ಜನಸಮಾನ್ಯರು ಹಲವು ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಕ್ಷೇತ್ರದಲ್ಲಿ ಜನತೆಯ ಸಮಸ್ಯೆಗಳನ್ನು ಪೂರ್ಣವಾಗಿ ಕಡೆಗಣಿಸಲಾಗಿದ್ದು, ವ್ಯಾಪಾರಿ, ಉದ್ಯಮ ಹಿತಾಸಕ್ತಿಗಳು ಪೂರ್ಣವಾಗಿ ಮೇಲುಗೈ ಸಾಧಿಸಿದೆ. ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ, ಎಲ್ಲಾ ಗ್ರಾಮಗಳಲ್ಲಿ ಕಸ ವಿಲೇವಾರಿಗೆ ಯೋಜನೆ, ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ, ಗಾಂಜಾ, ಡ್ರಗ್ಸ್ ಸಹಿತ ಮಾದಕ ಜಾಲಗಳ ನಿರ್ಮೂಲನೆ, ಕ್ರಿಮಿನಲ್ ಚಟುವಟಿಕೆಗಳಿಗೆ ಕಡಿವಾಣ, ಕೋಮುಗಲಭೆಗಳಿಗೆ ಕಡಿವಾಣ, ಸೌಹಾರ್ದತೆಗೆ ಒತ್ತು, ಯುವಜನರ ಉದ್ಯೋಗ ಸೃಷ್ಟಿಗೆ ಒತ್ತು, ನೇತ್ರಾವತಿ ನದಿ ನೀರನ್ನು ಉಳಿಸಲು ಯೋಜನೆ, ಮರಳುಗಾರಿಕೆ ನೀತಿ ರೂಪಿಸಲು ಒತ್ತು, ಸಮರ್ಪಕ ಕುಡಿಯುವ ನೀರಿನ ಯೋಜನೆ, ಪ್ರತಿ ಗ್ರಾಮಗಳಿಗೂ ಸರಕಾರಿ ಬಸ್ ಸೌಲಭ್ಯಕ್ಕೆ ಪ್ರಯತ್ನ, ಕಡಲ್ಕೊರತಕ್ಕೆ ಶಾಶ್ವತ ಪರಿಹಾರ ಎಂದ ಅವರು ಪ್ರಸಕ್ತ ಸನ್ನಿವೇಶದಲ್ಲಿ ಕ್ಷೇತ್ರದ ಜನತೆಗೆ ಅಗತ್ಯವಿರುವ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮತ್ತು ಜನಸಾಮಾನ್ಯರ ಜೀವನ ಮಟ್ಟದಲ್ಲಿ ಏರಿಕೆ ಸಾಧ್ಯವಾಗುವಂತೆ ಮಾಡುವುದೇ ನನ್ನ ಗುರಿ ಎಂದು ತಿಳಿಸಿದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಉಚ್ಚಿಲ್, ಸಿಪಿಎಂ ಉಳ್ಳಾಲ ವಲಯ ಸದಸ್ಯ ಪದ್ಮಾವತಿ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ವಿಲಾಸಿನಿ ತೊಕ್ಕೊಟ್ಟು, ಜೀವನ್ ರಾಜ್ ಕುತ್ತಾರ್ ಉಪಸ್ಥಿತರಿದ್ದರು


