UN NETWORKS
ಕೋಟೆಕಾರ್: ಏನೋ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ಗೆ ಸೇರಿದ್ದ ನಾನು ಅದರ ಒಳಗೆ ಹೋದ ನಂತರವೇ ಕಾಂಗ್ರೆಸ್ ಬಣ್ಣ ಹಾಗೂ ನೈಜ ಸಂಗತಿ ಅರಿವಾಗಿದೆ. ಇಂದು ನಾನು ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿದ್ದೇನೆ. ಕಾಂಗ್ರೆಸ್ನಲ್ಲಿರುವ ಇನ್ನಷ್ಟು ಜನ ಬಿಜೆಪಿಗೆ ಪರಿವರ್ತನೆಯಾಗಲಿದ್ದಾರೆ. ನಾಳೆ ಯು.ಟಿ.ಖಾದರ್ ಅವರು ಕೂಡಾ ಬಿಜೆಪಿ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಇದೆ ಎಂದು ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ್ ಅವರು ಹೇಳಿದರು.
ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಕೋಟೆಕಾರ್ ಬೀರಿಯಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 60 ವರ್ಷದಿಂದ ದೇಶದಲ್ಲಿ ಆಳ್ವಿಕೆ ಮಾಡಿರುವ ಕಾಂಗ್ರೆಸ್ ಪಕ್ಷದಿಂದ ಇಂದಿಗೂ ದೇಶದಲ್ಲಿ ಜಾತಿಯ, ಧರ್ಮದ ಅಸಮಾನತೆಗೆ ಮುಕ್ತಿ ಸಿಕ್ಕಿಲ್ಲ, ಶ್ರೀಮಂತ ಬಡವ ಅಂತರಕ್ಕೆ ಮುಕ್ತಿ ಸಿಕ್ಕಿಲ್ಲ. ರಾಹುಲ್ ಗಾಂಧಿಯಂತವರು, ಸಿದ್ದರಾಮಯ್ಯನಂತವರು, ಯು.ಟಿ.ಖಾದರ್ ನಂತವರು ದೇಶದಲ್ಲಿ ಸಾವಿರಾರು ಜನ ಹುಟ್ಟುತ್ತಾರೆ. ಆದರೆ ನರೇಂದ್ರ ಮೋದಿಯಂತವರು ಒಬ್ಬರೇ ಹುಟ್ಟಲು ಸಾಧ್ಯ. ಮೋದಿಯ ಆಡಳಿತದಿಂದ ಇಂದು ವಿಶ್ವಗುರುವಾಗಿ ಬೆಳೆಯುತ್ತಿದ್ದು, ಅಮೇರಿಕದ ಅಧ್ಯಕ್ಷ ಟ್ರಂಪ್ ನಂತವರೇ ಇಂದು ಮೋದಿಯ ಹಿಂದೆ ನಿಲ್ಲುವಂತಾಗಿದೆ ಎಂದರು.
ಕಾಂಗ್ರೆಸ್ ಎನ್ನುವಂತಹದ್ದು ಅದೊಂದು ಚ್ಯುಯಿಂಗಮ್ ಇದ್ದಂತೆ. ಕಳೆದ 60 ವರ್ಷದಿಂದ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮೊದಲಾದ ನಾಯಕರು ಜಗಿದು ಜಗಿದು ಈಗ ಅದರಲ್ಲಿ ರಸವೇ ಇಲ್ಲದಂತಾಗಿದೆ. ಕೊನೆಯಲ್ಲಿ ಈಗ ರಾಹುಲ್ ಗಾಂಧಿಯವರು ಅದೇ ರಸವಿಲ್ಲದ ಚ್ಯುಯಿಗಮ್ನ್ನು ಜಗಿಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವದ್ಧಿ ಅಭಿವೃದ್ಧಿಯಾಗಿದೆ ಎಂದು ಗೊಬ್ಬಿಡುತ್ತಾರೆ. ಒಂದು ಸರಿಯಾದ ಐಟಿಐ, ಪಾಲಿಟೆಕ್ನಿಕ್ ಕಾಲೇಜಾಗಲೀ, 100 ಬೆಡ್ ಇರುವ ಸರಕಾರಿ ಆಸ್ಪತ್ರೆಯಾಗಲೀ, ಒಂದು ಅಗ್ನಿಶಾಮಕ ಘಟಕವಾಗಲೀ ಇಲ್ಲಿ ಇನ್ನೂ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಕಳೆದ ಹಲವಾರು ವರ್ಷಗಳಿಂದ ಸಮಸ್ಯೆಯಾಗಿರುವ ಕಡಲ್ಕೊರೆತಕ್ಕೆ ಕಡಲಿಗೆ ಕಲ್ಲು ಹಾಕಿ ಖಜಾನೆಯನ್ನು ಖಾಲಿ ಮಾಡುತ್ತಿದ್ದಾರೆಯೇ ಹೊರತು ಶಾಶ್ವತ ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ಪ್ರಮುಖವಾಗಿ ಈ ಭಾಗದಲ್ಲಿ ಸಾಮರಸ್ಯದ ಜೀವನವನ್ನು ಕೊಡಲು ಸಾಧ್ಯವಿಲ್ಲ. ಕೋಮಗಲಭೆಗಳಿಂದ ಇಂದು ಎಷ್ಟೋ ಜನ ಯುವಕರು ಅಂಗಾಗಗಳನ್ನು ಕಳೆದುಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಯರಾಮ ಶೆಟ್ಟಿ, ಕ್ಷೇತ್ರ ಚುನಾವಣಾ ಸಂಚಾಲಕ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಬಿಜೆಪಿ ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ರವೀಂದ್ರ ಶೆಟ್ಟಿ ಉಳಿದೊಟ್ಟು, ನಮಿತಾ ಶ್ಯಾಂ, ಧನಲಕ್ಷ್ಮೀ ಗಟ್ಟಿ, ಅಶ್ರಫ್ ಹರೇಕಳ, ಸೀತಾರಾಮ್, ಮೋಹನ್ ರಾಜ್, ಅಜಂತ್ ಮೊದಲಾದವರು ಉಪಸ್ಥಿತರಿದ್ದರು.


