UN NETWORKS
ಕೊಣಾಜೆ: ಪ್ರತೀ ವರ್ಷ ನಿಯತವಾಗಿ ನಡೆಯುವ ಕಾರ್ಯಕ್ರಮವಾದರೂ ಇದೊಂದು ವಿಶಿಷ್ಟವಾದ ಕಾರ್ಯಕ್ರಮ; ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಭೂಮಿಕೆಯನ್ನು ಸಿದ್ಧಪಡಿಸಲು ಇಂತಹ ವೇದಿಕೆಗಳು ಸಹಕಾರಿ ಎಂದು ಡಾ. ನರಸಿಂಹಮೂರ್ತಿ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿ ಮತ್ತು ಬಿತ್ತಿ ಪತ್ರಿಕೆಯ ವಾರ್ಷಿಕ ಸಂಚಿಕೆಯ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕವನ ರಚನೆ ಅನ್ನುವುದು ಸ್ವಪರಿಶ್ರಮದಿಂದ, ಸಾಧನೆಯಿಂದ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಮುಂದುವರಿದಾಗ ಮಾತ್ರ ಸಾಧ್ಯ. ಆರಂಭದಲ್ಲಿ ಅದು ತೊದಲು ನುಡಿಯಾಗಿರಲೀ ಸರಳ ನುಡಿಯಾಗಲೀ ಬರೆಯಲು ಪ್ರಕಟಿಸಲು ಪ್ರಯತ್ನಿಸಿ. ಸಂಕೀರ್ಣತೆ, ಸಂಕ್ಷಿಪ್ತತೆ, ಧ್ಯನ್ಯಾತ್ಮಕತೆ ಕವನ ರಚನೆಯ ಸಂದರ್ಭದಲ್ಲಿ ಗಮನಿಸಬೇಕಾದುದು ಅವಶ್ಯ. ವಿದ್ಯಾರ್ಥಿದೆಸೆಯಲ್ಲಿ ಈ ತರಹದ ಕಾರ್ಯಕ್ರಮಗಳು ಜೀವನದಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟು ಮುಂದುವರಿಯಲು ಸಹಕಾರಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಅವರು ಮಾತನಾಡುತ್ತಾ ಇದು `ಭಿತ್ತಿ’ಯಲ್ಲ; `ಭಿತ್ತಿ’. ಅಂದರೆ ಬೀಜವನ್ನು ಬಿತ್ತಿ ಬೆಳೆಯುವಂತೆ ಅಕ್ಷರವನ್ನು ಬಿತ್ತಿ ಬೆಳೆಯುವ ಕಲೆ. 1991ರಲ್ಲಿ ಆರಂಭವಾಗಿ ಸುಮಾರು 27 ವರ್ಷಗಳಿಂದ ನಿರಂತರವಾಗಿ ಹೊರಬರುತ್ತಿದ್ದು, ನಮ್ಮ ನಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ನಾವು ಬಿತ್ತಿ ಬೆಳೆಸಬೇಕು ಎಂಬುದಕ್ಕೆ ರೂಪಕವಾಗಿ ಇಟ್ಟಂತಹ ಅರ್ಥಪೂರ್ಣವಾದ ಹೆಸರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳ ಯುವ ಕವಿಗಳಾದ ಹರ್ಷ ಗಣೇಶ್, ಅಮಿತ್ ಮಾ. ಕುಡಚೆ, ಶ್ರೀವಾಣಿ, ಮೈತ್ರಿ ಭಟ್, ವಿನಾಯಕ ಸಂಕದ, ಗುರುಕಿರಣ್, ಉಮಾಶಂಕರ ಕೇಳತ್ತಾಯ, ಆರ್ಷಿಯ, ಅತೀಕ್, ಲತಾ ಶೆಣೈ, ರಮೇಶ ಆರ್, ಮತ್ತು ರಾಕೇಶ್ ಕುಡಿಗನೂರ ಅವರು ತಮ್ಮ ಕವನಗಳನ್ನು ವಾಚಿಸಿದರು.
ಬಿತ್ತಿ ಪತ್ರಿಕೆಯ ಸಂಪಾದಕರಾದ ಹನಮಂತಪ್ಪ ಬನ್ನಿ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಅಶ್ವಿನಿ ಅವರು ಪ್ರಾರ್ಥಿಸಿದರು. ರಾಕೇಶ್ ಕುಡಿಗನೂರ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿ. ಶಿವರಾಮ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ ಆರ್, ಡಾ. ರಾಜಶ್ರೀ ಹಾಗೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


