UN NETWORKS
ಮಂಗಳೂರು: ದ.ಕ ಜಿಲ್ಲಾ ಭೇಟಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಗರದ ಟಿಎಂಎ ಪೈ ಕನ್ವೆನ್ಶನ್ ಹಾಲ್ನಲ್ಲಿ ಬಿಡುಗಡೆಗೊಳಿಸಿದ “ಪ್ರಗತಿಯ ಪಕ್ಷ ಕರ್ನಾಟಕ” ಹೆಸರಿನ ಕರ್ನಾಟಕ ಪ್ರಣಾಳಿಕೆ-2018-2023 ಯ ಮೊದಲ ಪ್ರತಿಯನ್ನು ಹಿರಿಯ ಮುಖಂಡ ಜನಾರ್ದನ ಪೂಜಾರಿಯವರಿಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ರಾಹುಲ್, ಕಾಂಗ್ರೆಸ್ ಪ್ರಣಾಳಿಕೆ ಕೆಲವರು ಕುಳಿತು ಸಿದ್ಧಪಡಿಸಿರುವಂಥದ್ದಲ್ಲ. ಇದು ಕರ್ನಾಟಕದ ಜನತೆಯ ಮಾತಾಗಿದೆ. ಈ ಪ್ರಣಾಳಿಕೆಯನ್ನು ಜನರ ಬಳಿ ತೆರಳಿ ಅವರ ಭಾವನೆ, ಆಶಯವನ್ನು ಸಂಗ್ರಹಿಸಿ ಸಿದ್ಧಪಡಿಸಲಾಗಿದೆ ಎಂದರು.
ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯ್ಲಿ, ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಪಕ್ಷದ ಜಿಲ್ಲಾ ಉಸ್ತುವಾರಿ ವಿಷ್ಣುನಾಥನ್, ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವೇದಿಕೆಯಲ್ಲಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಶಾಸಕರಾದ ಮೊಯ್ದಿನ್ ಬಾವಾ, ಜೆ.ಆರ್.ಲೋಬೋ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಪಕ್ಷವೊಂದರ ರಾಜ್ಯ ಚುನಾವಣಾ ಪ್ರಣಾಳಿಕೆಯು ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದಲ್ಲಿ ಅದೂ ಮಂಗಳೂರಿನಲ್ಲಿ ಬಿಡುಗಡೆಗೊಂಡಿದೆ.
ಕಳೆದ ನಾಲ್ಕು ತಿಂಗಳಿನಿಂದ 15 ಸದಸ್ಯರನ್ನೊಳಗೊಂಡ ಪ್ರಣಾಳಿಕೆ ಸಮಿತಿಯ ಸದಸ್ಯರು ವಿವಿಧ ಕ್ಷೇತ್ರದ ತಜ್ಞರೊಂದಿಗೆ ಸಮಾಲೋಚಿಸಿ ಸಮಗ್ರವಾಗಿ ಚರ್ಚಿಸಿ ಸಿದ್ಧಪಡಿಸಿರುವ ಈ ಪ್ರಣಾಳಿಕೆಯಲ್ಲಿ ಕರ್ನಾಟಕವನ್ನು ಆರು ವಿಭಾಗವನ್ನಾಗಿಸಿಕೊಂಡು ಅಲ್ಲಿನ ಮೂಲ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಕಲ್ಪಿಸಲು ಆದ್ಯತೆ ನೀಡಲಾಗಿದೆ. ರಾಜ್ಯ ಸರಕಾರದ ವಿಷನ್ 2025, ಜಿಲ್ಲಾವಾರು ನೋಟ ಹಾಗೂ ಕ್ಷೇತ್ರವಾರು ಫಲಾನುಭವಿಗಳ ಸ್ಪಂದನದ ಮಾತುಗಳನ್ನೊಳಗೊಂಡ ಪ್ರತಿಬಿಂಬ ಇತ್ಯಾದಿಯನ್ನೂ ಕೂಡ ಪ್ರಣಾಳಿಕೆಯಲ್ಲಿ ಅವಲೋಕಿಸಲಾಗಿದೆ.


