UN NETWORKS
ಉಳ್ಳಾಲ: ಈ ಬಾರಿಯ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಇವರು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಬುಧವಾರ ನಡೆದಿದ್ದು, ಎಲ್ಲವೂ ಕ್ರಮಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಜೆಡಿಎಸ್‍ನ ಅಶ್ರಫ್, ಎಂಇಪಿ ಅಭ್ಯರ್ಥಿ ಉಸ್ಮಾನ್ ನಾಮಪತ್ರ ಸಲ್ಲಿಸುವುದರೊಂದಿಗೆ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಇವರ ಪೈಕಿ ಕಣದಲ್ಲಿ ಉಳಿಯುವವರೆಷ್ಟು ಎಂದು ತಿಳಿಯಲು ಇನ್ನೆರಡು ದಿನ ಕಾಯಬೇಕಾಗಿದೆ. ನಾಮಪತ್ರ ಸಲ್ಲಿಸಿದ ದಿನವೇ ರಾಜಕೀಯ ಜಿದ್ದಾಜಿದ್ದಿ ಅಭ್ಯರ್ಥಿಗಳ ನಡುವೆ ಆರಂಭಗೊಂಡಿದೆ. ಸಚಿವ ಖಾದರ್ ತನ್ನ ಸ್ಥಾನ ಉಳಿಸಲಿಕ್ಕಾಗಿ ಹೋರಾಟ ಮಾಡುತ್ತಿದ್ದರೆ, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದ ಸಂತೋಷ್ ಕುಮಾರ್ ಅವರು ಈ ಬಾರಿ ಬಿಜೆಪಿಗಳ ಮತ ಹಂಚಿ ಹೋಗದಂತೆ ಮಾಡಲು ತೆರೆಮೆರೆಯ ಪ್ರಯತ್ನ ನಡೆಸುವ ಜತೆಗೆ ಅಲ್ಪ ಸಂಖ್ಯಾತರ ಮತಗಳನ್ನು ಬುಟ್ಟಿಗೆ ಹಾಕಲು ಭಾರೀ ಪ್ರಯತ್ನ ಮುಂದುವರಿಸಿದ್ದಾರೆ. ಈ ಕಾರಣದಿಂದಾಗಿ ಈಗಾಗಲೇ ಮತಯಾಚನೆ ಕಾರ್ಯ ಶುರು ಮಾಡಿದ್ದಾರೆ.
ಜೆಡಿಎಸ್‍ನಿಂದ ಕಣಕ್ಕಿಳಿದಿರುವ ಅಶ್ರಫ್ ಅವರು ಈಬಾರಿ ದರ್ಗಾ ವಿವಾದವನ್ನು ಮುಂದಿಟ್ಟು ಮತಯಾಚನೆ ಮಾಡುತ್ತಿದ್ದಾರೆ. ದರ್ಗಾ ವಿಚಾರದಲ್ಲಿ ಎಸ್ಸೆಸ್ಸೆಫ್ ಸದಸ್ಯರಿಗೆ ಖಾದರ್‍ರವರ ಮೇಲೆ ಅಸಮಾಧಾನ ಇರುವುದರಿಂದ ಅವರ ಮತಗಳನ್ನು ತನ್ನ ಬುಟ್ಟಿಗೆ ಹಾಕಲು ಭಾರೀ ಪ್ರಯತ್ನ ನಡೆಸಿದ್ದಾರೆ. ಎಸ್ಸೆಸ್ಸೆಫ್ ಸಂಘಟಕರ ಮತೆ ಸಿಕ್ಕಿದರೆ ಗೆಲುವು ಸಾಧ್ಯವಾಗಬಹುದು. ಖಾದರ್‍ರವರಿಗೆ ಮತಗಳ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರ ಅವರದ್ದು. ಖಾದರ್ ವಿರುದ್ಧ ಕಣಕ್ಕಿಳಿಯಲು ಸಿದ್ಧರಾಗಿದ್ದ ಎಸ್ಸೆಸ್ಸೆಫ್ ನಾಯಕ ಅಲ್ತಾಫ್ ಕುಂಪಲ ಕೊನೆಗಳಿಗೆಯಲ್ಲಿ ನಾಮಪತ್ರ ಸಲ್ಲಿಸಲು ಹಿಂದೇಟು ಹಾಕಿದ್ದೂ ಕೂಡಾ ಇದೇ ಉದ್ದೇಶದಿಂದ ಎಂಬುದು ಸ್ಪಷ್ಟವಾಗಿದೆ. ಅಲ್ತಾಫ್ ನಿಂತರೆ ಅಲ್ಪ ಸಂಖ್ಯಾತರ ಮತಗಳು ಹಂಚಿಕೆಯಾಗುತ್ತದೆ. ನಿಲ್ಲದೇ ಇದ್ದರೆ ಖಾದರ್‍ರವರ ಮೇಲೆ ಅಸಮಾಧಾನ ಇರುವ ಅಲ್ಪ ಸಂಖ್ಯಾತರ ಮತಗಳು ಅಶ್ರಫ್ ಪಾಲಾಗುವ ಸಾಧ್ಯತೆಗಳು ಜಾಸ್ತಿ ಇವೆ ಎಂಬ ಲೆಕ್ಕಾಚಾರ ಇವರದ್ದು.
ಬಿಜೆಪಿಯ ಅಭ್ಯರ್ಥಿಯಾಗಿ ಸಂತೋಷ್ ಅವರು ಕಣಕ್ಕಿಳಿದಿರುವುದರಿಂದ ಅವರ ಪರ ಕೆಲವು ಮುಸ್ಲಿಂ ಯುವಕರ ಬೆಂಬಲ ಕೂಡಾ ವ್ಯಕ್ತವಾಗಿದೆ. ಕೆಲವರು ಅವರ ಪರ ಮತಯಾಚಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಲೆಕ್ಕಾಚಾರದಲ್ಲಿ ಮಂಗಳೂರು ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರ ಮತಗಳು ವಿಭಜನೆಗೊಳ್ಳುವುದಂತೂ ಖಚಿತ. ಅಲ್ಲದೇ ಎಂಇಪಿ ಅಭ್ಯರ್ಥಿ ಉಸ್ಮಾನ್, ಮತ್ತು ಸಿಪಿಐಎಂ ಪಕ್ಷದಿಂದ ನಿತಿನ್ ಕಣದಲ್ಲಿರುವುದರಿಂದ ಇವರಿಗೆ ಮುಸ್ಲಿಮರ ಚಿಲ್ಲರೆ ಮತಗಳು ಸಿಗಬಹುದು. ನಿರೀಕ್ಷಿತ ಮಟ್ಟದಲ್ಲಿ ಇಲ್ಲಿ ಯಾವ ಪಕ್ಷ ಕೂಡಾ ಬರುವುದಿಲ್ಲ. ಇಲ್ಲಿ ಸ್ಪಧೆ ಏರ್ಪಟ್ಟರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಜೆಡಿಎಸ್‍ನಲ್ಲಿ ಅಶ್ರಫ್ ಕಣದಲ್ಲಿರುವುದರಿಂದ ಅವರು ಕೆಲವು ಸಂಘಟನೆಗಳಲ್ಲಿ ಗುರುತಿಸಿಕೊಂಡ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದ ಮತಗಳು ಇವರ ಪಾಲಾಗುವ ಸಾಧ್ಯತೆಗಳು ಕೂಡಾ ಹೆಚ್ಚಾಗಿವೆ. ಒಟ್ಟಿನಲ್ಲಿ ಇಲ್ಲಿ ಐವರು ಅಭ್ಯರ್ಥಿ ಕಣದಲ್ಲಿ ಒಂದು ವೇಳೆ ಉಳಿದರೆ ಲೆಕ್ಕಕ್ಕಿರುವುದು ಮೂರು ಮಾತ್ರ. ಮೂವರ ನಡುವೆ ರಾಜಕೀಯ ಜಿದ್ದಾಜಿದ್ದಿ ನಡೆಯಬಹುದು.


