UN NETWORKS
ಉಳ್ಳಾಲ: ಜಮ್ಮುವಿನ ದೇವಸ್ಥಾನದಲ್ಲಿ ನಡೆದಿರುವ ಅಪ್ರಾಪ್ತೆ ಬಾಲಕಿ ಅತ್ಯಾಚಾರ ದೇವರನ್ನೇ ಅತ್ಯಾಚಾರ ಮಾಡಿದಂತೆ ಎಂದು ಚಿಂತಕ ಹಾಗೂ ಪ್ರಾಧ್ಯಾಪಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅವರು ಅಡ್ಕರೆಪಡ್ಪು ಇಲ್ಲಿನ ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ವತಿಯಿಂದ ದೇರಳಕಟ್ಟೆ ಸಿಟಿ ಗ್ರೌಂಡಿನಲ್ಲಿ ಶುಕ್ರವಾರ ಜಮ್ಮುವಿನ ಅಪ್ರಾಪ್ತೆ ಬಾಲಕಿ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಜರಗಿದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪೊಲೀಸ್ ಇಂಟಲಿಜೆನ್ಸ್ ಸರಿಯಾಗಿ ಶೂಟಿಂಗ್ ಮಾಡಿ, ಮಾಧ್ಯಮದವರು ಸರಿಯಾಗೇ ಹೇಳಿಕೆಗಳನ್ನು ದಾಖಲಿಸಿ, ದೇಶದ ಎಲ್ಲಿ ಬೇಕಾದರೂ ಇಂತಹ ಹೇಳಿಕೆಯನ್ನೇ ನೀಡುತ್ತೇನೆ ಎಂದು ಖಡಾಖಂಡಿತವಾಗಿ ಹೇಳುತ್ತೇನೆ ಎಂದರು. ಬಸವಣ್ಣನವರ ವಚನವನ್ನು ತಪ್ಪಾಗಿ ನುಡಿದಾಗ ಹಿಯ್ಯಾಳಿಸಿದವರಿಗೆ ಅವರ ವಚನಗಳನ್ನು ನೈಜವಾಗಿ ಅಧ್ಯಯನ ನಡೆಸುತ್ತಿದ್ದಲ್ಲಿ ದೇಶದಾದ್ಯಂತ ಇಂತಹ ಭಯಭೀತ ವಾತಾವರಣ ಸೃಷ್ಟಿಯಾಗುತ್ತಿರಲಿಲ್ಲ. ಜಮ್ಮು ಕಾಶ್ಮೀರದ ದೇವಸ್ಥಾನವೊಂದರಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಮುಗ್ಧ ಬಾಲಕಿಯ ಕುಟುಂಬವನ್ನು ಅಲೆಮಾರಿ ಅನ್ನುವವರಿಗೆ, ತಮ್ಮ ಪ್ರಧಾನಿಯೂ ವಿದೇಶಗಳಲ್ಲೇ ಇರುವ ಅಲೆಮಾರಿ ಅನ್ನುವುದು ಗಮನದಲ್ಲಿರಬೇಕು.
ಬಾಲಕಿ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಭುಗಿಲೇಳುತ್ತಿದ್ದರೂ, ವಿದೇಶದಲ್ಲಿ ಕುಳಿತ ಪ್ರಧಾನಿ `ಅತ್ಯಾಚಾರ ಎಂದಿಗೂ ಅತ್ಯಾಚಾರವೇ, ಅದನ್ನು ರಾಜಕೀಯವಾಗಿ ತಿರುಚುವ ಪ್ರಯತ್ನ ತಪ್ಪು ‘ ಅನ್ನುತ್ತಾ ಬೇಜವಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜನೆ ನಡೆಸಲು ಹೊರಟಿರುವ ಆಳುವವರು ಪ್ರಗತಿಪರರನ್ನು ಭಿಕ್ಷುಕರನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗ್ಡೆ ಭಾಷೆ ಇಲ್ಲದ ಜನಪ್ರತಿನಿಧಿ. ಆತ ಸಂವಿಧಾನ ಬದಲಿ ಮಾಡಲು ಹೊರಟಿದ್ದಾನೆ. ಆತ ಅಂಬೇಡ್ಕರ್ ಅವರ ಅಪ್ಪನಾ’ ಎಂದು ತೀವ್ರ ವಾಗ್ದಾಳಿ ನಡೆಸಿದರು.
24 ಗಂಟೆಗಳ ಕಾಲವೂ ದೇಶ ವಿಭಜನೆ ಮಾಡಲು ಹೊರಟ ಪ್ರಧಾನಿ ಮೋದಿ ಮತ್ತೆ ಚಹಾ ಮಾರಾಟ ಮಾಡಲಿ, ಇಲ್ಲವೇ ಪಕೋಡಾ ಮಾರಾಟವನ್ನಾದರೂ ಮಾಡಲಿ. ಅದನ್ನು ಕುಡಿಯಲು ಮತ್ತು ತಿನ್ನಲು ಸದಾ ಸಿದ್ಧರಿದ್ದೇವೆ. ನರೇಂದ್ರ ಅಲ್ಲ ಅದು ನರ ಇಲ್ಲದ ಮನುಷ್ಯ ಎಂದು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾನ ನಡೆಸಿದರು.
ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಶರೀಫ್ ಅರ್ಷದಿ ಮಾತನಾಡಿ ಬಾಲಕಿ ಪ್ರತಿನಿಧಿಸುವ ಸಮುದಾಯದವರು ದೇಶ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ, ಕಾರ್ಗಿಲ್ ಹಾಗೂ ನಂತರ ನಡೆದ ಭಾರತ್ ಪಾಕಿಸ್ತಾನ ಯುದ್ಧದಲ್ಲಿ ಈ ಸಮುದಾಯ ಪಾಕ್ ವಿರುದ್ಧ ಹೋರಾಡಿದ ಇತಿಹಾಸ ಹೊಂದಿದೆ. ಇಂತಹ ದೇಶಪ್ರೇಮಿ ಸಮುದಾಯದ ಬಾಲಕಿಯನ್ನು ದೇವರು ನೆಲೆಸುವ ಸ್ಥಳದಲ್ಲೇ ನಿರಂತರ ಕ್ರೂರವಾಗಿ ಅತ್ಯಾಚಾರ ನಡೆಸಿ ಕೊಲೆಗೈಯ್ಯಲಾಗಿದೆ. ಇಂತಹ ಘಟನೆ ವಿರುದ್ಧ ಮಾನವ ಸಮುದಾಯ ಧ್ವನಿ ಎತ್ತದಿದ್ದಲ್ಲಿ ಮುಂದೆ ಹೆಣ್ಮಕ್ಕಳು ಜೀವಿಸುವುದೇ ಕಷ್ಟಕರವಾಗಬಹುದು ಎಂದರು.
ಪಾನೀರು ರಹ್ಮಾನಿಯಾ ಜುಮಾ ಮಸೀದಿಯ ಖತೀಬ್ ಯಾಸರ್ ಅರಾಫತ್ ಕೌಸರಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಶರೀಫ್ ಅರ್ಷದಿ, ಸಲೀಂ ದೇಲಿ ಕಾಸರಗೋಡು, ಆದಂ ಫೈಝಿ, ಹಮೀದ್ ಮದನಿ, ದೇರಳಕಟ್ಟೆ ಇರ್ಷಾದುಸ್ಸಿಬಿಯಾನ್ ಗೌರವಾಧ್ಯಕ್ಷ ಬಿ.ಎಂ.ಸತ್ತಾರ್ ಬೆಳ್ಮ, ಅಡ್ಕರೆಪಡ್ಪು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ, ಗಲ್ಫ್ ಸಮಿತಿ ಅಧ್ಯಕ್ಷ ಅಬ್ದುಲ್ ರಹೀಂ ಮೊದಲಾದವರು ಉಪಸ್ಥಿತರಿದ್ದರು.
ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ಅಧ್ಯಕ್ಷ ಸಿರಾಜ್ ಅಡ್ಕರೆಪಡ್ಪು ಕಾರ್ಯಕ್ರಮ ನಿರೂಪಿಸಿದರು.


