UN NETWORKS
ಮುಡಿಪು: ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಕೊಲೆ ಅತ್ಯಂತ ಖಂಡನೀಯವಾದ ವಿಚಾರ. ಪ್ರಕರಣದಿಂದ ವಿಶ್ವದಲ್ಲೇ ಭಾರತೀಯರು ತಲೆತಗ್ಗಿಸುವಂತಹ ಕೃತ್ಯವಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಹೇಳಿದರು.
ಅವರು ಜಮ್ಮು ಕಾಶ್ಮೀರದ ಕತುವಾ ಪ್ರದೇಶದಲ್ಲಿ ಎಂಟರ ಹರೆಯದ ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮುಡಿಪು ವಲಯ ನಾಗರಿಕ ಹೋರಾಟ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಪಾಲ್ಗೊಳ್ಳುವಿಕೆಯಲ್ಲಿ ಮಂಗಳವಾರ ಮುಡಿಪು ಜಂಕ್ಷನ್ನಿನಲ್ಲಿ ಹಮ್ಮಿಕೊಂಡಿದ್ದ ಮೊಂಬತ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೃತ್ಯ ದೇಶದ ಬಹುಸಂಸ್ಕೃತಿಕಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಜಾರಿಗೊಳಿಸುವ ಮೂಲಕ ಅದಕ್ಕೆ ಬೆಂಬಲಿಸುವವರಿಗೆ ಹಾಗೂ ಬೆಂಬಲಿಸಿ ಮಾತನಾಡುವವರಿಗೂ ಬಹುದೊಡ್ಡ ಶಿಕ್ಷೆಯಾಗಬೇಕಿದೆ. ದೇಶಾದ್ಯಂತ ಇಂತಹ ನೀಚ ಕೃತ್ಯಗಳು ಪುನರಾವರ್ತನೆಗೊಳ್ಳುತ್ತಿದೆ. ಅದಕ್ಕಾಗಿ ನಿರ್ಭಯ ಕಾನೂನು ಇನ್ನಷ್ಟು ಕಠಿಣಗೊಳ್ಳಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಪಿಶಾಚಿಗಳಿಗೆ ಭಯ ಹುಟ್ಟಿಸುವಂತಹ ಕಾನೂನು ಶೀಘ್ರವೇ ಜಾರಿಗೆ ಬರಬೇಕಿದೆ. ಈ ಮೂಲಕ ಹತ್ಯೆಗೀಡಾದ ಅಮಾಯಕ ಬಾಲಕಿಯ ಕುಟುಂಬಸ್ಥರಿಗೆ ಶೀಘ್ರವೇ ನ್ಯಾಯ ದೊರಕಲಿ ಎಂದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ , ಜಿ.ಪಂ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ, ತಾ.ಪಂ ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರ.ಕಾ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಪಂ.ಸದಸ್ಯ ನಾಸಿರ್ ನಡುಪದವು, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸಿದ್ದೀಖ್ ಪಾರೆ, ಪ್ರವೀಣ್ ಆಳ್ವ, ಅಬೂಬಕರ್ ಸಜಿಪ, ಸೀತಾರಾಮ ಶೆಟ್ಟಿ, ಇಸ್ಮಾಯಿಲ್ ಮೀನಂಕೋಡಿ, ಸುರೇಖಾ ಶೆಟ್ಟಿ, ಅರುಣ್ ಡಿಸೋಜಾ, ಬಶೀರ್ ಮುಡಿಪು, ಇಬ್ರಾಹಿಂ ನಡುಪದವು, ಯೂಸುಫ್ ಪಾನೇಲ, ಜನಾರ್ದನ ಕುಲಾಲ್ ಭಾಗವಹಿಸಿದ್ದರು. ಸತ್ತಾರ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.


