UN NETWORKS
ಇನೋಳಿ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಗಳ ಬದಲಾಗಿ ಮಾನ್ಯತೆಯನ್ನು ತುಲನೆ ಮಾಡಲಾಗುತ್ತಿದೆ. ವಾಸ್ತವವಾಗಿ ವಿದ್ಯಾರ್ಥಿಗಳು ಬುದ್ಧಿವಂತಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಲ್ಲಿ ಅವರ ಭವಿಷ್ಯದ ಜತೆಗೆ ಶಿಕ್ಷಣ ಸಂಸ್ಥೆಯ ಹೆಸರು ಖ್ಯಾತಿ ಪಡೆಯುವುದು ಎಂದು ಮುಂಬೈ ಐಐಟಿ ಇದರ ನಿರ್ದೇಶಕ ಡಾ.ಎ.ಕೆ ಸುರೇಶ್ ಅಭಿಪ್ರಾಯಪಟ್ಟರು.
ಅವರು ಕೊಣಾಜೆ ಇನೋಳಿಯ ಬೇರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೇರಿಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ `ಬಿಐಟಿ ಆಂಡ್ ಬೀಡ್ಸ್ ಉತ್ಸವ-2018′ ನ್ನು ಉದ್ಘಾಟಿ ಮಾತನಾಡಿದರು.
ಬಿಐಟಿ ಶಿಕ್ಷಣ ಸಂಸ್ಥೆಯ ವಾತಾವರಣ ಪ್ರಕೃತಿ ಮಡಿಲಿನ ಜತೆಗಿನ ಒಡನಾಟ ಇರುವುದರಿಂದ ಶಿಕ್ಷಣಕ್ಕೆ ಪೂರಕವಾಗಿದೆ. ಶಿಕ್ಷಣದ ಜತೆಗೆ ನಡತೆಯ ಪಾಠವೂ ಮುಖ್ಯವಾಗಿರುತ್ತದೆ. ಪ್ರಸ್ತುತ ಕ್ರಿಕೆಟ್ ಆಟದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಆದರೂ ಗೆಲುವಿಗಾಗಿ ಹಿಡಿದ ಹಾದಿ ಇಡೀ ದೇಶವನ್ನೇ ಮುಜುಗರಕ್ಕೀಡಾಗುವಂತೆ ಮಾಡಿತ್ತು. ಅದಕ್ಕಾಗಿ ಯಶಸ್ಸಿನ ಹಾದಿಯಲ್ಲಿ ನಡತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದೆ. ಇಂಜಿನಿಯರಿಂಗ್ ವಿಭಾಗ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ವಿಚಾರಗಳನ್ನು ಒಳಗೊಂಡ ಸಮಗ್ರ ವಿಷಯವಾಗಿದೆ.
ತಾಂತ್ರಿಕ ಕೌಶಲ್ಯಗಳ ಉಪಯೋಗದ ಜತೆಗೆ ಆವಿಷ್ಕಾರಗಳು ಇಂಜಿನಿಯರಿಂಗ್ ಪದವೀಧರರನ್ನು ಯಶಸ್ಸಿನ ಹಾದಿಯಲ್ಲಿ ನಡೆಸುತ್ತದೆ. ಹಳ್ಳಿಯಲ್ಲಿ ಮಹಿಳೆಯರು ಕುಳಿತು ಅಡುಗೆ ಮಾಡಿ ಕಷ್ಟಪಡುವ ಸ್ಥಿತಿಯನ್ನು ಮನಗಂಡು ಇಂಜಿನಿಯರುಗಳು ತಾಂತ್ರಿಕ ಕೌಶಲ್ಯವನ್ನು ಉಪಯೋಗಿಸಿ ನಿಂತು ಅಡುಗೆ ಮಾಡುವಂತಹ ಓಲೆಯನ್ನು ತಯಾರಿಸಿಕೊಟ್ಟಿದ್ದರು. ಟ್ರೈಪಾಡ್ ಮೂಲಕ ಓಲೆಯನ್ನು ರಚಿಸಲಾಗಿತ್ತು. ಆದರೆ ಮನೆ ಹುಲ್ಲಿನದ್ದಾಗಿದ್ದರಿಂದಾಗಿ ಟ್ರೈಪಾಡ್ ಸ್ಟವ್ ನಿಂದಾಗಿ ಇಡೀ ಮನೆಯ ಸುಟ್ಟು ಹೋಗುವಂತಾಯಿತು. ಈ ನಿಟ್ಟಿನಲ್ಲಿ ಆವಿಷ್ಕಾರಗಳು ಅಪಾಯಕಾರಿಯಾಗದಂತೆ ಸಾಧಿಸುವ ಜವಾಬ್ದಾರಿ ಇಂಜಿನಿಯರ್ ಗಳಿಗೆ ಇರಬೇಕಿದೆ. ಕಲಿಕಾ ಸಂದರ್ಭ ಪ್ರಾಯೋಗಿಕ ಜ್ಞಾನ ಮುಖ್ಯವಾಗಿರುವುದರಿಂದ ಕಾರ್ಖಾನೆ, ತಾಂತ್ರಿಕ ಕಾರ್ಯ ನಡೆಯುವ ಸ್ಥಳಕ್ಕೆ ಅವಶ್ಯಕವಾಗಿ ಭೇಟಿ ನೀಡಬೇಕಿದೆ ಎಂದರು.
ಬೇರೀಸ್ ಅಕಾಡೆಮಿ ಆಫ್ ಲರ್ನಿಂಗ್ ಇದರ ಅಧ್ಯಕ್ಷ ಸೈಯದ್ ಮಹಮ್ಮದ್ ಬ್ಯಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಇನ್ಸ್ಪಿರೇಜ್ ಸಾಫ್ಟ್ ವೇರ್ ಕನ್ಸಲ್ಟಿಂಗ್ ಪ್ರೈ.ಲಿ. ನ ನಿರ್ದೇಶಕಿ ಅನ್ನಪೂರ್ಣ, ಮಂಗಳೂರು ನವಬಂದರು ಟ್ರಸ್ಟಿನ ಮೆಕ್ಯಾನಿಕಲ್ ಇಂಜಿನಿಯರ್ ಸತೀಶ್ ಹೊನ್ನಕಟ್ಟೆ ಮುಖ್ಯ ಅತಿಥಿಗಳಾಗಿದ್ದರು.
ಬೇರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಪ್ರಾಂಶುಪಾಲ ಡಾ. ಆ್ಯಂಟನಿ ಎ.ಜೆ , ಬೇರಿಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ಇದರ ಪ್ರಾಂಶುಪಾಲ ಅಶೋಕ್ ಮೆಂಡೋನ್ಸ ವಾರ್ಷಿಕ ವರದಿ ವಾಚಿಸಿದರು.ಬಿಐಟಿ ಸಿಎಸ್‍ಇ ವಿಭಾಗ ಮುಖ್ಯಸ್ಥ ಪ್ರೊ. ಮುಸ್ತಾಫ ಬಸ್ತಿಕೋಡಿ ಸ್ವಾಗತಿಸಿದರು. ಉರೂಸಾ ಖಾನ್ ಕಾರ್ಯಕ್ರಮ ನಿರೂಪಿಸಿದರು. ಅಬೂಬಕರ್ ಶಮೀಝ್ ವಂದಿಸಿದರು.
ಕಾರ್ಯಕ್ರಮದಲ್ಲಿ ರ್ಯಾಂಕ್ , ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಮತ್ತು ಆಟ, ಸಾಂಸ್ಕೃತಿಕ ಸ್ಪರ್ದೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.


