UN NETWORKS
ಉಳ್ಳಾಲ: ವಾಯುಯಾನ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ದೇಶ -ವಿದೇಶದಾದ್ಯಂತ ವಿಪುಲ ಅವಕಾಶಗಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಮೂಲಕ ವಾಯುಯಾನ ಸಂಸ್ಥೆಗಳ ಆದಾಯ ಹೆಚ್ಚಾಗುವುದರೊಂದಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ (ಟಿಟಿಎಂ) ವಿಭಾಗದ ಅಸಿಸ್ಟೆಂಟ್ ಪ್ರೊ. ಜೋಸೆಫ್ ಪಿ.ಡಿ. ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ಸೋಮೇಶ್ವರ ರಸ್ತೆಯಲ್ಲಿರುವ ಮೆರೇಡಿಯನ್ ಕಾಲೇಜು ಇದರ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ವಿತರಿಸಿ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಾಯುಯಾನ ಉತ್ಕøಷವಾಗಿ ಬೆಳೆಯುತ್ತಿದ್ದು, ಭಾರತದಿಂದ ಹೊರದೇಶಕ್ಕೆ ಮತ್ತು ಹೊರದೇಶಗಳಿಂದ ದೇಶಕ್ಕೆ ತಲುಪಲು ದರ ಬಹಳಷ್ಟು ಕಡಿಮೆಯಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿ ಜತೆಗೆ ಆದಾಯ ಮತ್ತು ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತಿದೆ. ಸಾಮಾಜಿಕವಾಗಿಯೂ ವಾಯುಯಾನ ವಲಯ ಉನ್ನತ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು, ಕಂಪೆನಿಗಳಿಗೆ ಬೇಕಾದ ರೀತಿಯ ಕೌಶಲ್ಯವೃದ್ಧಿಯನ್ನು ಬೆಳೆಸಬೇಕಿದೆ. ಅದಕ್ಕಾಗಿ ಪರಿಶ್ರಮ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆರೆಡಿಯನ್ ಕಾಲೇಜು ನಿರ್ದೇಶಕ ಡಾ| ಜೋಬಿ ಇ.ಸಿ ವಹಿಸಿ ಮಾತನಾಡಿ ಮೆರೇಡಿಯನ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಎರಡು ಕೋರ್ಸುಗಳನ್ನು ಪರಿಚಯಿಸಿದ್ದು, ಹಲವು ವಿದ್ಯಾರ್ಥಿಗಳು ಕೋರ್ಸುಗಳಲ್ಲಿ ಪದವಿ ಪಡೆದು ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ ಎಂದರು.
ಕಾಲೇಜಿನ 34 ವಿದ್ಯಾರ್ಥಿಗಳು ಪದವಿ ಪಡೆದುಕೊಂಡರು.
ಈ ಸಂದರ್ಭ ಕಾಲೇಜು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಮಿಥುನ್ ಚಂದ್ರ ಉಪಸ್ಥಿತರಿದ್ದರು. ನೀನಾ ರಮಿತಾ ಸ್ವಾಗತಿಸಿದರು. ಉಪಪ್ರಾಂಶುಪಾಲೆ ರಿತಿಕಾ ದಾಸ್ ವಾರ್ಷಿಕ ವರದಿ ವಾಚಿಸಿದರು.


