UN NETWORKS
ಉಳ್ಳಾಲ: ಅಲ್ಲಿ ಎದ್ದು ಬಿದ್ದು ಕೆಸರಿನಲ್ಲಿ ಹೊರಳಾಡಿ ವಾಹನವನ್ನು ದೂಡಿಕೊಂಡು ಹೋದವರೇ ಜಾಸ್ತಿ. ಮೈಪೂರ್ತಿ ಕೆಸರು ಮಣ್ಣನ್ನು ಹೊತ್ತು ವಾಪಸ್ಸು ಮನೆ ಸೇರುವಂತಾದರೆ, ಇನ್ನು ಕೆಲವರು ಅದೇ ಬಟ್ಟೆಯಲ್ಲಿ ವಾಹನದಲ್ಲಿ ಪ್ರಯಾಣಿಸುವಂತಾಯಿತು.
ಇದು ಅಕಾಲಿಕವಾಗಿ ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿನ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ದೇರಳಕಟ್ಟೆ ಆಸ್ಪತ್ರೆ ಎದುರಿನ ವಾಸ್ತವ ಸ್ಥಿತಿ.
ತಿಂಗಳ ಹಿಂದೆ ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ನಿತ್ಯಾನಂದನಗರದಲ್ಲಿರುವ ಬೇರೀಸ್ ಮಾಲ್ ವರೆಗಿನ ರಾಜ್ಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ಭಾಗದ ರಸ್ತೆಗೂ ಮಣ್ಣು ಹಾಕಿ ಎತ್ತರ ಮಾಡಲಾಗಿತ್ತು. ಒಂದು ಬದಿಯ ರಸ್ತೆಯಲ್ಲಿ ಮಣ್ಣನ್ನು ಶೇಖರಿಸಿದ್ದರಿಂದಾಗಿ ಏಕಮುಖ ಸಂಚಾರ ಮಾತ್ರವಿತ್ತು. ಭಾನುವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದಾಗಿ ಮಣ್ಣು ಕೆಸರಾಗಿ ವಾಹನಗಳು ತೆರಳುವಾಗ ಜಾರಲು ಆರಂಭವಾಗಿತ್ತು.
ಹಲವು ಬಸ್ಸುಗಳು ಅರಿವಿಲ್ಲದೆ ತೆರಳಿದ್ದರಿಂದಾಗಿ ಮಾರ್ಗಮಧ್ಯೆ ಜಾರಲು ಆರಂಭಿಸಿದರಿಂದಾಗಿ ಮುಂದೆ ಪ್ರಯಾಣಿಸಲು ಅಸಾಧ್ಯವಾಯಿತು. ದ್ವಿಚಕ್ರ ವಾಹನ ಸವಾರರು ಹಲವು ಕೆಸರಿನಲ್ಲಿ ವಾಹನ ಹೂತು ಅಲ್ಲೇ ಕೆಳಗೆ ಬಿದ್ದು ಮೈಪೂರ್ತಿ ಕೆಸರು ಆಗುವಂತಾಯಿತು. ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ವಾಹನ ಸವಾರರಿಗೆ ಹೋಗದಂತೆ ತಡೆದರೂ ಹಲವರು ಅದೇ ಮಾರ್ಗವಾಗಿ ತೆರಳಿದ್ದರಿಂದಾಗಿ ಇಕ್ಕಟ್ಟಿನಲ್ಲಿ ಸಿಲುಕುವಂತಾಯಿತು.
ಪರ್ಯಾಯ ಮಾರ್ಗ : ಕೆ.ಎಸ್.ಹೆಗ್ಡೆ ಆಸ್ಪತ್ರೆ ಹಿಂಭಾಗದಿಂದ ದೇರಳಕಟ್ಟೆ ತಲುಪುವ ಮಾರ್ಗವನ್ನು ಪರ್ಯಾಯ ಮಾರ್ಗವಾಗಿ ಉಪಯೋಗಿಸಿ ವಾಹನಗಳನ್ನು ಪೊಲೀಸರು ಕಳುಹಿಸಿದರು.
ಎರಡು ಕಡೆಗಳಲ್ಲಿ ಒಮ್ಮೆಲೇ ಕಾಮಗಾರಿ ನಡೆಸುವ ಅವಶ್ಯಕತೆ ಏನಿತ್ತು? ಮಳೆ ಬರುವ ಸೂಚನೆಯಿದ್ದರೂ ಗುತ್ತಿಗೆದಾರರು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ ಎಂದು ಸ್ಥಳೀಯರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.


