UN NETWORKS
ಉಳ್ಳಾಲ: ಕಾಂಗ್ರೆಸ್ ಸರಕಾರ ಆಡಳಿತದ ಬಳಿಕ ಉಳ್ಳಾಲದಲ್ಲಿ ವಿಜಯೋತ್ಸವದ ಮರುದಿನವೇ ಗೋಕಳ್ಳತನ ಆರಂಭವಾಗಿದ್ದು, ಕಳೆದ ಐದು ವರ್ಷಗಳಿಂದ ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಯಲ್ಲಿ 22 ಎಫ್ ಐ ಆರ್ ಗಳು ಗೋ ಕಳ್ಳರ ವಿರುದ್ಧ ಆಗಿದ್ದು, ಇಲ್ಲಿನ ಜನಪ್ರತಿನಿಧಿಗಳ , ಕಾಂಗ್ರೆಸ್ನ ದ್ವಂದ್ವ ನೀತಿಯಿಂದ ಅವರ ಕುಮ್ಮಕ್ಕಿನಿಂದಲೇ ಗೋಕಳ್ಳರು ರಾಜಾರೋಷವಾಗಿ ತಮ್ಮ ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ವಿಶ್ವಹಿಂದೂ ಪರಿಷತ್ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅಭಿಪ್ರಾಯಪಟ್ಟರು.
ಕೈರಂಗಳ ಪುಣ್ಯಕೋಟಿನಗರದಲ್ಲಿ ನಡೆಯಯುತ್ತಿರುವ ಟಿ.ಜಿ,.ರಾಜಾರಾಮ ಭಟ್ಟರ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಪೂರಕವಾಗಿ ಭಟ್ ಅವರ ಆರೋಗ್ಯ ಸ್ಥಿರತೆಗಾಗಿ ಕುತ್ತಾರು ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಗೋಪ್ರೇಮಿ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ಬಳಿಕ ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ಉಳ್ಳಾಲ ಉಚ್ಚಿಲದಲ್ಲಿ ಮಯ್ಯರ ಮನೆಯ ಗೋ ಕಳವು ಮಾಡಿ ಗೋವಿನ ತಲೆ ಕೈಕಾಲುಗಳನ್ನು ತುಳಸಿಕಟ್ಟೆಯಲ್ಲಿ ಇಡುವ ಮೂಲಕ ಪ್ರಾರಂಭಗೊಂಡ ಗೋಹತ್ಯೆ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಮುಂದುವರೆದಿದ್ದು, ಹಿಂದೂ ಸಮಾಜಕ್ಕೆ ಸವಾಲು ಎಸೆಯುವ ಕಾರ್ಯ ಆಗುತ್ತಿದೆ. ಇಲ್ಲಿನ ಗಾಂಜಾ ಮಾಫಿಯ, ಅಕ್ರಮ ಕಸಾಯಿಖಾನೆ ಕಾರ್ಯನಿರ್ವಹಿಸಲು ಮುಖ್ಯ ಕಾರಣ ಕ್ಷೇತ್ರದ ಶಾಸಕರು ಅಕ್ರಮಕ್ಕೆ ನೀಡುತ್ತಿರುವ ಬಾಹ್ಯಬೆಂಬಲ ಕಾರಣವಾಗಿದ್ದು, ಇದರ ವಿರುದ್ಧ ಹಿಂದೂ ಸಮಾಜ ಸಂಘಟಿತರಾಗಿ ಹೋರಾಟ ನಡೆಸುವ ಅಗತ್ಯತೆ ಇದೆ ಎಂದರು.
ಭಾರತದಲ್ಲಿ ಮಾತೆಯ ಸ್ಥಾನ ನೀಡಲಾಗಿದೆ. ದೇಶದಲ್ಲಿ 35 ಕೋಟಿ ಜನಸಂಖ್ಯೆಯಿದ್ದಾಗ ಗೋವುಗಳ ಸಂಖ್ಯೆ 100 ಕೋಟಿಯಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ 125 ಕೋಟಿ ಜನಸಂಖ್ಯೆಯಿದ್ದರೂ ಗೋವುಗಳ ಸಂಖ್ಯೆ 30 ಕೋಟಿಗೆ ಕುಸಿದಿದೆ. ಹಿಂದುಗಳ ಭಾವನೆಗೆ ಧಕ್ಕೆ ಮಾಡುವ ಏಕೈಕ ಉದ್ದೇಶದಿಂದ ಗೋಹತ್ಯೆ, ಕಳ್ಳತನ ನಡೆಸಲಾಗುತ್ತಿದೆ ಎಂದು ಶರಣ್ ಪಂಪ್ವೆಲ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸತೀಶ್ ಕುಂಪಲ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಿರಂತರ ಗೋಹತ್ಯೆ, ದೌರ್ಜನ್ಯ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭ ತಲಪಾಡಿಯಲ್ಲಿ ಗೋವಿನ ಮೇಲೆ ದೌರ್ಜನ್ಯ ಎಸಗಲಾಗಿದ್ದು ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಇಂತಹ ಕೃತ್ಯ ನಡೆಯುತ್ತಿದೆ ಎಂದು ಹೇಳಿದರು.
ಪ್ರಮುಖರಾದ ಚಂದ್ರಹಾಸ ಉಳ್ಳಾಲ್, ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಮೋಹನ್ರಾಜ್ ಕೆ.ಆರ್., ಗೋಪಾಲ ಕುತ್ತಾರ್, ಕೃಷ್ಣ ಶೆಟ್ಟಿ ತಾಮಾರ್, ಚರಣ್ರಾಜ್, ದಯಾನಂದ ತೊಕ್ಕೊಟ್ಟು, ಜೀವನ್ ತೊಕ್ಕೊಟ್ಟು, , ಗೋಪಾಲ ಇನೋಳಿ ಕೋರ್ಯ, ರವಿ ಅಸೈಗೋಳಿ, ನಾಗೇಶ್ ಕುಂಪಲ, ಬಿ.ಎನ್.ನಾರಾಯಣ, ಪ್ರಶಾಂತ ಕಾಪಿಕಾಡ್, ಗೋಪಿನಾಥ ಬಗಂಬಿಲ, ಸಂಜೀವ ಶೆಟ್ಟಿ ಅಂಬ್ಲಮೊಗರು, ವಿಶ್ವನಾಥ ಕೊಲ್ಯ, ದೇವದಾಸ್ ಕೊಲ್ಯ, ಪವಿತ್ರ ಕೆರೆಬೈಲ್, ಸುರೇಶ್ ಶೆಟ್ಟಿ ಅಂಬ್ಲಮೊಗರು, ಪದ್ಮನಾಭ ಮರ್ಕೆದು ಮತ್ತಿತರರು ಉಪಸ್ಥಿತರಿದ್ದರು.


