UN NETWORKS
ಉಳ್ಳಾಲ: ನಗರೋತ್ಥಾನ ನಿಧಿಯಡಿ ಮಂಜೂರಾದ ಅನುದಾನದಿಂದ ನಡೆಯುತ್ತಿದ್ದ ಮಾಡೂರಿನಿಂದ ಕೊಂಡಾಣ ದೈವಸ್ಥಾನ ರಸ್ತೆಯ ಕಾಮಗಾರಿಯನ್ನು ಸಚಿವರು ತಡೆಹಿಡಿದಿದ್ದು, ಇದನ್ನು ಖಂಡಿಸಿ ಕೊಂಡಾಣ ಮಾಡೂರು ನಾಗರಿಕರು ಬೀರಿ ಜಂಕ್ಷನ್ನಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ಒಂದು ವರ್ಷದ ಹಿಂದೆ ರಸ್ತೆ ಅವ್ಯವಸ್ಥೆ ಕುರಿತು ಮಾಡೂರಿನ ಯುವಕನ ಪತ್ರಕ್ಕೆ ಪ್ರಧಾನಿ ಸಚಿವಾಲಯ ಸ್ಪಂಧಿಸಿತ್ತು. ಈ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯಿತಿ ಪೌರಾಯುಕ್ತರು ನಗರೋತ್ಥಾನದಡಿ ರೂ. 50 ಲಕ್ಷ ಮಂಜೂರಾಗಿರುವ ಕುರಿತು ಹಿಂಬರಹ ನೀಡಿದ್ದರು.
ಈ ನಡುವೆ ಸುದ್ಧಿ ಮಾಧ್ಯಮಗಳಲ್ಲಿ ಸುದ್ಧಿ ಪ್ರಚಾರವಾಗುತ್ತಿದ್ದಂತೆ ಪ್ರಧಾನಿ ಮೋದಿ ಸ್ಪಂಧಿಸಿ ರಸ್ತೆ ಕಾಮಗಾರಿ ನಡೆಯುತ್ತಿದೆ ಅನ್ನುವ ಫ್ಲೆಕ್ಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಹಬ್ಬಿತ್ತು. ಇದರಿಂದ ಅನುದಾನ ಮಂಜೂರುಗೊಳಿಸಿದ ಸಚಿವ ಯು.ಟಿ.ಖಾದರ್ ಅವರು ಮುಂದಕ್ಕೆ ಪ್ರಧಾನಿಯವರೇ ರಸ್ತೆ ಕಾಂಕ್ರೀಟಿಕರಣಗೊಳಿಸಲಿ ಎಂದು ಕಾಮಗಾರಿಯನ್ನು ಅರ್ಧಕ್ಕೆ ತಡೆಹಿಡಿದಿದ್ದರು.
ಇದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ರಾಜಕೀಯ ಮಾಡುವ ಉದ್ದೇಶದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿಲ್ಲ. ಕೊಂಡಾಣ ರಸ್ತೆ ಅಭಿವೃದ್ಧಿಯಲ್ಲಿ ತಾರತಮ್ಯ ನಡೆಸಲು ಮುಂದಾಗಿರುವ ಸಚಿವರ ವಿರುದ್ಧ ಪ್ರತಿಭಟನೆಯಾಗಿದೆ. 3-4 ವರ್ಷಗಳ ಹಿಂದೆ ಕೊಂಡಾಣ ರಸ್ತೆಯ ಅಭಿವೃದ್ಧಿಯಾಗದ ಸಂದರ್ಭ ಸಂಸದರು ಹಾಗೂ ಜಿ.ಪಂ ಅನುದಾನದಿಂದ ಡಾಮರೀಕರಣಗೊಳಿಸಲಾಗಿತ್ತು.
ಇದೀಗ ಕೋಟೆಕಾರು ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಮೂಲಕ ಸಿಗಬೇಕಾದ ರೂ.1 ಕೋಟಿ ಅನುದಾನದಲ್ಲಿ ಕೇವಲ ರೂ. 50 ಲಕ್ಷ ಅನುದಾನ ಮೀಸಲಿರಿಸುವ ಮೂಲಕ ಸರ್ವಾಧಿಕಾರ ಧೋರಣೆ ನೀತಿ ಅನುಸರಿಸುತ್ತಿದ್ದಾರೆ. ಅದನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ಸುದ್ಧಿಯಿಂದ ತಡೆಹಿಡಿದಿರುವುದು ಖಂಡನೀಯ. ಹಿಂದೂಗಳ ಆರಾಧ್ಯ ದೈವ ಕ್ಷೇತ್ರಕ್ಕೆ ಹೋಗುವ ದಾರಿಯನ್ನು ತಡೆಹಿಡಿದಲ್ಲಿ , ಮುಂದಕ್ಕೆ ಅಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಭಾಗವಹಿಸಲು ಅವರಿಗೆ ಮುಖವಿಲ್ಲ. ಪಕ್ಷ ನೋಡದೆ ಚುನಾಯಿತ ಅಭ್ಯರ್ಥಿಯಂತೆ ಕಾರ್ಯ ನಿರ್ವಹಿಸಿ ಎಂದು ಎಚ್ಚರಿಸಿದರು.

ಮನೆಮಂದೆ ಪ್ರತಿಭಟಿಸುತ್ತೇವೆ : ಒಂದು ಗಂಟೆಯ ಕಾಲ ಬೀರಿ ಜಂಕ್ಷನ್ನಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಗರಿಕರು ಮುಂದಕ್ಕೆ ನ್ಯಾಯ ಸಿಗದಿದ್ದಲ್ಲಿ ಸಚಿವ ಖಾದರ್ ಅವರ ಮನೆಮುಂದೆ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ಕ್ಷೇತ್ರ ಕಾರ್ಯದರ್ಶಿ ಮೋಹನರಾಜ್ ಕೆ.ಆರ್, ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊಳ್ಳೆಂಜೀರು, ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ, ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ಗೋಪಾಲ ಕುತ್ತಾರ್ , ತಾ.ಪಂ ಸದಸ್ಯ ರವಿಶಂಕರ್ ಸೋಮೇಶ್ವರ, ಅಜ್ಜು ಮಾಡೂರು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
* ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ನೀರಾವರಿ ಸಚಿವರು ಜಿಲ್ಲೆಗೆ ಮಂಜೂರುಗೊಳಿಸಿದ ರೂ. 53 ಕೋಟಿ ಅನುದಾನದ ಕಡತಗಳನ್ನು ಸಚಿವರು ಮೂಲೆಗುಂಪಾಗಿಸಿದ್ದಾರೆ.
* ಚುನಾವಣೆ ಸಮೀಪಿಸುತ್ತಿದ್ದಂತೆ ಇನ್ನೂ ಆಗದ 176 ಕೋಟಿ ನೀರಿನ ಯೋಜನೆಯನ್ನು ಬ್ಯಾನರಿನಲ್ಲಿ ಹಾಕಿ ಪ್ರಚಾರಪಡೆದುಕೊಳ್ಳುತ್ತಿದ್ದಾರೆ.
* ಉಳ್ಳಾಲಬೈಲಿನಲ್ಲಿ ಬಿಜೆಪಿ ವಾರ್ಡಿನಲ್ಲೂ ಕಾಮಗಾರಿ ನಡೆಸದೆ ನಗರೋತ್ಥಾನ ಅನುದಾನವನ್ನು ಹಿಂದಕ್ಕೆ ಕಳುಹಿಸಿದ್ದಾರೆ.
* ಕುಂಪಲ ಭಾಗದಲ್ಲಿಯೂ ಗುತ್ತಿಗೆದಾರರು ಜಲ್ಲಿ, ಕಲ್ಲುಗಳನ್ನು ಹಾಕಿದರೂ ಅದನ್ನೇ ವಾಪಸ್ಸು ಮಾಡಿದ್ದಾರೆ.
* ಹಿಂದುಗಳು ಹೆಚ್ಚಿರುವ ಜಾಗಗಳಲ್ಲಿ ಕಾಮಗಾರಿಗಳನ್ನು ನಡೆಸಿಲ್ಲ.
* ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನು ಗಣನೆಗೆ ಪಡೆದುಕೊಳ್ಳದೆ ಕಾಮಗಾರಿ ನಡೆಸಲಾಗುತ್ತಿದೆ.
ಸತೀಶ್ ಕುಂಪಲ್


