UN NETWORKS
ದೇರಳಕಟ್ಟೆ: ಪ್ರಮಾಣ ಪತ್ರ ಪಡೆಯುವುದೆಂದರೆ ಪದವಿಯ ಕನಸು ನನಸಾದಂತೆ, ಇಷ್ಟಕ್ಕೇ ಓದು ನಿಲ್ಲಿಸದೆ ಶಿಕ್ಷಣ ಪಡೆದ ಕ್ಷೇತ್ರದಲ್ಲಿ ಇನ್ನಷ್ಟು ಜ್ಞಾನ ಸಂಪಾದನೆಗೆ ಆದ್ಯತೆ ನೀಡಿ ತಮ್ಮಲ್ಲಿರುವ ಪ್ರತಿಭೆ ದೇಶವೇ ಗುರುತಿಸುವಂತೆ ಮಾಡಬೇಕು ಎಂದು ಮಂಗಳೂರು ವಿವಿ ಉಪಕುಲಪತಿ ಪ್ರೊ.ಕೆ.ಭೈರಪ್ಪ ಅಭಿಪ್ರಾಯಪಟ್ಟರು.
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಅಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ವಿಶ್ವವಿದ್ಯಾಲಯದ ಪಾನೀರ್ ಕ್ಯಾಂಪಸ್‍ನಲ್ಲಿರುವ ನಿಟ್ಟೆ ವಾಕ್‍ಶ್ರವಣ ಸಂಸ್ಥೆಯ ಎಂಟನೇ ಪದವಿ ಹಾಗೂ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಜೀವನದ ಮುಂದಿನ ಹಂತದ ಆಯ್ಕೆಗಾಗಿ ಸಾಕಷ್ಟು ಅವಕಾಶಗಳಿದ್ದು ಜಾಗರೂಕತೆಯ ಆಯ್ಕೆ ನಮ್ಮದಾಗಿರಬೇಕು. ಕಷ್ಟದಲ್ಲಿರುವವರಿಗೆ ಸಹಕಾರ ನೀಡುವ, ವರ್ಷಕ್ಕೊಮ್ಮೆಯಾದರೂ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಬೆರೆತು ನಗುಮುಖದ ಸೇವೆ ನೀಡುವ ಗುಣ ಬೆಳೆಸಿಕೊಳ್ಳಬೇಕು. ರೋಗಿಯ ಪೂರ್ಣ ಪ್ರಮಾಣದ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಿಸ್ತು, ತಾಳ್ಮೆ ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುವುದು ಸಾಮಾನ್ಯ, ಅದನ್ನು ಸರಳವಾಗಿ ಬಗೆಹರಿಸುವ ಛಾತಿ ಹೊಂದಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ಪದವಿ ಎಂಬುದು ವೃತ್ತಿ ಜೀವನಕ್ಕೆ ನೀಡುವ ಪ್ರಮಾಣ ಪತ್ರ ಮಾತ್ರ. ನಾವು ಎಷ್ಟು ದೊಡ್ಡ ಸ್ಥಾನಕ್ಕೇರಿದರೂ ನಡೆದು ಬಂದ ದಾರಿಯನ್ನು ಅವಲೋಕಿಸುವುದು ಮುಖ್ಯ. ವೃತ್ತಿ ಸಂದರ್ಭ ಪರಿಸರದ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ವಾಕ್‍ಶ್ರವಣ ಸಾಮಥ್ರ್ಯ ಪರೀಕ್ಷಿಸಿ ಚಿಕಿತ್ಸೆ, ಮಾರ್ಗದರ್ಶನ ನೀಡಬೇಕು. ಕಲಿತ ಸಂಸ್ಥೆ, ಪೋಷಕರು, ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದರು.
ಪ್ರತಿಭಾನ್ವಿತರಿಗೆ ಪುರಸ್ಕಾರ
ಕಾರ್ಯಕ್ರಮದಲ್ಲಿ 33 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ನೀರಜಾ ಸುನಿಲ್ ಹಾಗೂ ದ್ವಿತೀಯ ರ್ಯಾಂಕ್ ಪಡೆದ ನಿಖಿಲಾ ಎಲ್ಸಾ ಪಿಲಿಪ್ ಮತ್ತು ಪ್ರತಿಭಾನ್ವಿತರನ್ನು ಪುರಸ್ಕರಿಸಲಾಯಿತು.

ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ದತ್ತಾತ್ರೇಯ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಮಾಯಾ ವರ್ಮ ಆರ್ ಪದವೀಧರರ ಹೆಸರು ಓದಿದರು. ಪ್ರಾಂಶುಪಾಲೆ ಶ್ವೇತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರುಂಗ ಎಂ.ಎಸ್.ವಂದಿಸಿದರು. ಅಖಿಲಾ ರಾಹುಲ್ ಕಾರ್ಯಕ್ರಮ ನಿರೂಪಿಸಿದರು.


