UN NETWORKS
ಕೊಲ್ಯ: ಶಾಲೆ, ಕಾಲೇಜುಗಳು, ಗ್ರಾಮ ಪಂಚಾಯಿತಿಗಳು, ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುತ್ತಿದೆಯಾದರೂ ರಸ್ತೆಬದಿ ಬೀಳುವ ಕಸಕ್ಕೆ ಮುಕ್ತಿ ಸಿಗುತ್ತಿಲ್ಲ, ನಾವು ಮಾಡುವ ಕಾರ್ಯಕ್ರಮಗಳೆಲ್ಲವೂ ನಿಷ್ಪ್ರಯೋಜಕವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ ಮಿಷನ್ ಅಧಿಕಾರಿ ಮಂಜುಳಾ ಜಿ. ಖೇದ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ ಮಿಷನ್, ಜಿಲ್ಲಾ ನೆರವು ಘಟಕದ ಆಶ್ರಯದಲ್ಲಿ ಕರಾವಳಿ ಕಲ್ಯಾಣ ಪರಿಷತ್ನ ಕೌಶಲ್ಯ ವತಿಯಿಂದ ಕೋಟೆಕಾರ್ ಪಟ್ಟಣ ಪಂಚಾಯಿತಿ, ಸೋಮೇಶ್ವರ ಹಾಗೂ ತಲಪಾಡಿ ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಭಾನುವಾರ ಕೊಲ್ಯ ಶಾರದಾ ಸಭಾ ಭವನದಲ್ಲಿ ನಡೆದ `ನಮ್ಮ ತ್ಯಾಜ್ಯ, ನಮ್ಮ ಹೊಣೆ’ ಮಾಹಿತಿ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾತನಾಡಿದರು.
ನಮ್ಮ ಮನೆಯಲ್ಲಿ ಸಂಗ್ರಹವಾಗಿ ರಸ್ತೆಬದಿ ನಾವು ಬಿಸಾಡುವ ಕಸ ಗ್ರಾಮ ಪಂಚಾಯಿತಿಗಳು ತೆಗೆಯಬೇಕು ಎನ್ನುವ ಸ್ಥಿತಿಯಲ್ಲಿ ನಾವಿದ್ದೇವೆ. ಇದರಿಂದಾಗಿ ಬುದ್ಧಿವಂತ ಜಿಲ್ಲೆಯಾದ್ಯಂತ ರಸ್ತೆಬದಿ ತ್ಯಾಜ್ಯರಾಶಿ ಕಾಣುತ್ತಿದೆ. ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಮೀನು ಗುರುತಿಸಿದರೆ ನೂರಾರು ಆಕ್ಷೇಪಗಳು ಬರುತ್ತಿವೆ. ಕಸ ನೀಡುವಾಗ ವಿಂಗಡಿಸದ ಪರಿಣಾಮ ಗ್ರಾಮದಿಂದ ವಾಮಂಜೂರಿಗೆ ಹೋಗುವ ತ್ಯಾಜ್ಯ ನಿರ್ವಹಿಸಲು ಸಾಧ್ಯವಾಗದೆ ಸ್ಥಳೀಯರ ಜೀವನ ದುಸ್ತರ ಎನಿಸಿದೆ. ನಮ್ಮಿಂದ ಸಂಗ್ರಹಗೊಂಡ ಕಸ ತಳಮಟ್ಟದಲ್ಲೇ ವಿಲೇವಾರಿಯಾದಾಗ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.

ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ ಪಾವೂರು, ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಹಾಗೂ ಕೌಶಲ್ಯ ಅಧ್ಯಕ್ಷ ಸತೀಶ್ ಕಾರಂತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಡುಗೆ ತ್ಯಾಜ್ಯದಿಂದ ಬಯೋಗ್ಯಾಸ್ ಬಗ್ಗೆ ವಿನಯ ಕುಮಾರ್, ಬಯೋಟೆಕ್ ಬಗ್ಗೆ ನಂದಿನಿ ಪೈ ಮಂಗಳೂಉ ಹಾಗೂ ಪೈಪ್ ಕಾಂಪೋಸ್ಟ್ ಬಗ್ಗೆ ಹರಿಶ್ಚಂದ್ರ ಅಡ್ಕ ಮಾಹಿತಿ ನೀಡಿದರು.
ಜಯಂತ್ ಸಂಕೊಳಿಗೆ ಕಾರ್ಯಕ್ರಮ ನಿರೂಪಿಸಿದರು.


