UN NETWORKS
ಉಳ್ಳಾಲ: ಇಂದು ಮಹಿಳೆಯರು ಪುರುಷರಿಗೆ ಸಮನಾಗಿ ವಿಶ್ವದಲ್ಲಿ ದೊಡ್ಡ ಸ್ಥಾನ ಅಲಂಕರಿಸುತ್ತಿದ್ದು ಸರ್ಕಾರವೂ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಲಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ ಜಿಲ್ಲೆ 317ಡಿ ಇದರ ವತಿಯಿಂದ ಉಳ್ಳಾಲ ತಾಜ್‍ಮಹಲ್ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಮಾಡಿ ಮಾತನಾಡಿದರು.
ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ, ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಮನೆಯಲ್ಲೇ ಸ್ವಉದ್ಯೋಗ ಮಾಡಲು ಲಯನ್ಸ್ ಕ್ಲಬ್‍ನಂತಹ ಸಂಘ-ಸಂಸ್ಥೆಗಳು ಮಾರ್ಗದರ್ಶನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಪ್ರಿಯದರ್ಶಿನಿ ಡಿ’ಸೋಜ, ಮರ್ಸಿ ವೀಣಾ ಡಿ’ಸೋಜ, ಸಬಿತಾ ಮೋನಿಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸಿ.ಕೆ. ಶ್ಯಾಮಲಾ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ನ ಜಿಲ್ಲಾ ಪ್ರಥಮ ಮಹಿಳೆ ನಮಿತಾ ಡಿ.ಹೆಚ್. ಮತ್ತು ಲಯನ್ಸ್ ಜಿಲ್ಲಾ ರಾಜ್ಯಪಾಲ ಹೆಚ್.ಆರ್.ಹರೀಶ್ ಚಾಲನೆ ನೀಡಿದರು. ಮಹಿಳಾ ಸಬಲೀಕರಣ ಜಿಲ್ಲೆ 317ಡಿಯ ಸಂಚಾಲಕಿ ವಾಣಿ ವಿ.ಆಳ್ವ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್‍ನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಬಿತಾ ಮೊನಿಸ್ ಮುಖ್ಯ ಭಾಷಣ ಮಾಡಿದರು.
ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಕವಿತಾ ಶಾಸ್ತ್ರಿ, ಪ್ರಥಮ ಉಪ ರಾಜ್ಯಪಾಲ ದೇವದಾಸ್ ಭಂಡಾರಿ, ದ್ವಿತೀಯ ಉಪರಾಜ್ಯಪಾಲ ರೊನಾಲ್ಡ್ ಐ. ಗೋಮ್ಸ್, ಸ್ವರ್ಣ ನಿರಂತರ ಉಳಿತಾಯ ಗುಂಪುಗಳ ಒಕ್ಕೂಟದ ಅಧ್ಯಕ್ಷೆ ರುಫಿನಾ ವೇಗಸ್, ಮಹಿಳಾ ಸಬಲೀಕರಣದ ಸಂಚಾಲಕರಾದ ಆಶಾ ರಾಬ್ ಆರೂರ್, ಸುಮಲತಾ ಎನ್. ಸುವರ್ಣ, ಜಿಲ್ಲಾಧ್ಯಕ್ಷರಾದ ಕವಿತಾ ಪಾಲ್ಕೆ, ಅನುರಾಧ ಶರತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ವಸಹಾಯ ಗುಂಪುಗಳ ಒಕ್ಕೂಟಕ್ಕೆ 50 ಸಾವಿರ ಧನಸಹಾಯವನ್ನು ನೀಡಲಾಯಿತು.

`ಮಹಿಳೆಯರಲ್ಲಿ ಹುಟ್ಟಿನಿಂದಲೇ ನಾಯಕತ್ವ ಗುಣವಿದೆ. ನಿಮ್ಮಲ್ಲಿರುವ ವ್ಯಕ್ತಿತ್ವ ಮತ್ತು ನಾಯಕತ್ವ ಗುಣವನ್ನು ಸಮಾಜಕ್ಕೆ ನೀಡುವ ಕಾರ್ಯ ಆಗಬೇಕಿದ್ದು ಲಯನ್ಸ್ ಈ ಕಾರ್ಯದಲ್ಲಿ ನಿರತವಾಗಿರುವುದು ಶ್ಲಾಘನೀಯ’
ಯು.ಟಿ.ಖಾದರ್, ಆಹಾರ ಸಚಿವ


