UN NETWORKS
ತೊಕ್ಕೊಟ್ಟು: ಹೋಬಳಿ ಮಟ್ಟದಲ್ಲಿ ರಾಜ್ಯದ ಪ್ರಥಮ ಇಂದಿರಾ ಕ್ಯಾಂಟೀನ್ ತೊಕ್ಕೊಟ್ಟು ನಗರಸಭೆಯ ನಿಲ್ದಾಣದಲ್ಲಿ ನಿರ್ಮಾಣಗೊಂಡಿದ್ದು ಮಾ. 24ರಂದು ಉದ್ಘಾಟನೆಗೊಳ್ಳಲಿದ್ದು ಬುಧವಾರ ಸಚಿವ ಯು.ಟಿ. ಖಾದರ್ ಅವರು ಕಾಮಗಾರಿ ಪರಿಶೀಲಿಸಿದರು.
ಕ್ಯಾಂಟೀನ್ ನಿರ್ಮಾಣ ಕಾಮಗಾರಿಯನ್ನು ಕೆಇಎಫ್ ಸಂಸ್ಥೆ ವಹಿಸಿಕೊಂಡಿದ್ದು ಬಹುತೇಕ ಪೂರ್ಣಗೊಂಡಿದೆ. ಉಡುಪಿ ಮೂಲದ ಪ್ರತಿಷ್ಠಿತ ಸಂಸ್ಥೆ ಅಡುಗೆ ಸಾಮಾಗ್ರಿ ಪರಿಕರ ಪೂರೈಸಲು ಗುತ್ತಿಗೆ ನೀಡಲಾಗಿದೆ. ಆಹಾರ ತಯಾರಿ, ಸರಬರಾಜು ಹಾಗೂ ವಿತರಣೆಗಾಗಿ ಮಂಗಳೂರಿನ ಕ್ಯಾಟರಿಂಗ್ ಸಂಸ್ಥೆ ವ್ಯವಸ್ಥೆ ಮಾಡಲಿದೆ.
ಬೆಳಗ್ಗಿನ ಉಪಹಾರಕ್ಕೆ 5ರೂ. , ಮಧ್ಯಾಹ್ನ ಹಾಗೂ ರಾತ್ರಿ ಊಟ 10ರೂ. ಗಳಲ್ಲಿ ಲಭ್ಯವಿರಲಿದ್ದು ಒಬ್ಬ ವ್ಯಕ್ತಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ 60ರೂ. ಗಳ ಲೆಕ್ಕಾಚಾರದಲ್ಲಿ ಸರಕಾರ ಕ್ಯಾಟರಿಂಗ್ ಸಂಸ್ಥೆಯ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ ಫಲಾನುಭವಿಗಳು 25ರೂ. ಪಾವತಿಸಿದರೆ ಉಳಿದ 35ರೂ. ಗಳನ್ನು ಕ್ಯಾಟರಿಂಗ್ ಸಂಸ್ಥೆಗೆ ಸರಕಾರ ಪಾವತಿಸಲಿದೆ. ಮಧ್ಯವರ್ತಿಗಳ ಕಾಟ ತಪ್ಪಲಿದ್ದು ಜೊತೆಗೆ ಆಹಾರದಲ್ಲಿ ಗುಣಮಟ್ಟವನ್ನು ಕಾಪಾಡಲು ಕಡ್ಡಾಯ ಸೂಚನೆ ನೀಡಲಾಗಿದೆ.
ಒಂದು ಹಂತದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರು ಲಕ್ಷ ಜನಸಂಖ್ಯೆ ಆಧರಿಸಿ ಆರು ಇಂದಿರಾ ಕ್ಯಾಂಟಿನ್ ತೆರೆಯುವ ಯೋಜನೆ ಇತ್ತಾದರೂ ಆಹಾರ ಸಚಿವರ ವಿಶೇಷ ಮುತುವರ್ಜಿಯಿಂದ ಉಳ್ಳಾಲ ಹೋಬಳಿ ಮಟ್ಟವಾಗಿದ್ದರೂ ಜನಸಂಖ್ಯೆಗಿಂತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ, ತನ್ನದೇ ಕ್ಷೇತ್ರ, ಶ್ರಮಿಕರು, ಬಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿ ಇರುವುದರಿಂದ ಮಂಜೂರಾತಿ ಮಾಡಿದ್ದು ಉದ್ಘಾಟನೆ ದಿನ ನಿಗದಿಯಾಗದೆ.
ಸುರತ್ಕಲ್ನಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟಿನ್ಗೆ ದುಷ್ಕರ್ಮಿಗಳು ಹಾನಿಗೊಳಿಸಿದ್ದರಿಂದ ಪ್ರತಿ ಇಂದಿರಾ ಕ್ಯಾಂಟಿನ್ಗೆ ಕನಿಷ್ಠ ಒಬ್ಬ ಭದ್ರತಾ ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ.
ಇಂದಿರಾ ಕ್ಯಾಂಟಿನ್ಗೆ ತಮಿಳುನಾಡಿನಲ್ಲಿ ದಿ. ಮುಖ್ಯಮಂತ್ರಿ ಜಯಲಿಲಿತಾ ಜಾರಿಗೆ ತಂದ ಜನಪ್ರಿಯ ಯೋಜನೆಯಾಗಿದ್ದ “ಅಮ್ಮ ಕ್ಯಾಂಟಿನ್’ ಪ್ರೇರಣೆಯಾಗಿದ್ದು ಅದರಂತೆ ರಾಜ್ಯದಲ್ಲಿ “ನಮ್ಮ ಕ್ಯಾಂಟಿನ್’ ಪರಿಕಲ್ಪನೆಯಲ್ಲಿ ಆರಂಭಿಸುವ ಯೋಜನೆ ಇತ್ತಾದರೂ ಕಡೆಗೆ ಈ ದೇಶದ ಡೇರಿಂಗ್ ಪ್ರಧಾನಿ ಖ್ಯಾತಿಯ ದಿ. ಇಂದಿರಾ ಗಾಂಧಿ ಅವರು ಬಡಜನತೆಗೆ ಕೊಟ್ಟ ಕೊಡುಗೆಯನ್ನು ಸದಾ ಕಾಲ ಸ್ಮರಣೀಯವಾಗಿಸುವ ಹಾಗೂ ನಿತ್ಯವೂ ನೆನಪಿಸುವ ನಿಟ್ಟಿನಲ್ಲಿ ನಮ್ಮ ಕ್ಯಾಂಟಿನ್ ಹೆಸರು ಬದಲಿಸಿ “ಇಂದಿರಾ ಕ್ಯಾಂಟಿನ್’ ತೆರೆಯಲಾಯಿತು.

ಆಹಾರದ ತೂಕದ ಪ್ರಮಾಣದಲ್ಲಿ ಸಂಸವಿದ್ದರೆ ಕ್ಯಾಂಟಿನ್ ನಲ್ಲಿರುವ ಡಿಜಿಟಲ್ ತೂಕ ಯಂತ್ರದಲ್ಲಿ ಪರೀಕ್ಷಿಸಲು ಅವಕಾಶವಿದೆ. ಹಾಗೆಯೇ ಕ್ಯಾಂಟಿನನ್ ಕುರಿತಾದ ಅನಿಸಿಕೆಗಳನ್ನು ಕ್ಯಾಂಟಿನ್ನಲ್ಲಿ ಅಳವಡಿಸಲಾದ ಸೂಚನಾ ಫಲಕದಲ್ಲಿರುವ ಇಮೇಲ್ ವಿಳಾಸಕ್ಕೆ ಕಳುಹಿಸಬಹುದು. ಆಹಾರಕ್ಕೆ ತಗುಲುವ ಮೊತ್ತದಲ್ಲಿ ಸ್ವಲ್ಪ ಭಾಗ ಕಾರ್ಮಿಕ ಇಲಾಖೆ ಭರಿಸಲಿದ್ದು ಉಳಿದ ಮೊತ್ತ ಸ್ಥಳೀಯ ಸಂಸ್ಥೆ ಭರಿಸಲಿದೆ.










