UN NETWORKS
ಉಳ್ಳಾಲ: ಅಲ್ಲಿರುವ 25 ಮನೆಗಳ ಮಂದಿ ಮಣ್ಣು ಮಿಶ್ರಿತ ಕೆಂಪು ಬಣ್ಣ ತಾಳಿರುವ ನೀರನ್ನೇ ಕುಡಿಯಬೇಕಿದೆ. ಕಳೆದ 12 ವರ್ಷಗಳ ಸಮಸ್ಯೆಗೆ ಈವರೆಗೂ ಸಂಬಂಧಪಟ್ಟ ಉಳ್ಳಾಲ ನಗರಸಭೆ ಅಧಿಕಾರಿಗಳು ಸ್ಪಂಧಿಸುತ್ತಿಲ್ಲ, ವಾರದೊಳಗೆ ಕಲುಷಿತ ನೀರು ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ನಗರಸಭೆ ಎದುರುಗಡೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಉಳ್ಳಾಲ ನಗರಸಭೆ ವ್ಯಾಪ್ತಿಯ ಅಬ್ಬಂಜರದ ದಲಿತ ಕಾಲನಿ ನಿವಾಸಿಗಳು ಹಾಕಿದ್ದಾರೆ.
ಹಳೇಯ ಟ್ಯಾಂಕಿನಿಂದ 25 ಮನೆಮಂದಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. 20 ವರ್ಷಕ್ಕಿಂತಲೂ ಹಳೇಯದಾದ ಟ್ಯಾಂಕ್ ಹಾಗೂ ಪೈಪ್ಲೈನ್ ನಾದುರಸ್ತಿಯಿಂದ ಕಲುಷಿತ ನೀರು ಬರುತ್ತಿದೆ . ಕೆಸರಿನಿಂದ ಕೂಡಿದ ನೀರು ಕುಡಿಯಲು ಬಟ್ಟೆ ಒಗೆಯಲು ಉಪಯೋಗಿಸಬೇಕಿದೆ. ಪಾತ್ರೆಗಳಲ್ಲಿ ನೀರು ಹಾಕಿದಲ್ಲಿ ಪಾತ್ರೆಯ ಬಣ್ಣವೇ ಬದಲಾಗುವ ಸ್ಥಿತಿಯಿದೆ. ಬಟ್ಟೆ ಒಗೆದರೂ ಬಿಳಿ ಬಣ್ಣದ ಬಟ್ಟೆ ಕೆಂಪು ಬಣ್ಣ ಪಡೆಯುತ್ತಿದೆ.
ಈ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ 2007ರಿಂದ ದಲಿತ ಕಾಲನಿ ನಿವಾಸಿಗಳು ಮನವಿ ಮಾಡುತ್ತಲೇ ಬಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಅನುದಾನದ ಕೊರತೆಯಿದೆ ಎಂದು ಹೇಳುತ್ತಾ, ಅದೇ ನೀರು ಕುಡಿಯುವಂತೆ ತಿಳಿಸಿ ವಾಪಸ್ಸಾಗುತ್ತಿದ್ದಾರೆ . ಅಧಿಕಾರಿಗಳಿಂದ ನ್ಯಾಯ ಸಿಗದೇ ಇದ್ದಾಗ ಜಿಲ್ಲಾಧಿಕಾರಿ ಕಚೇರಿಗೂ ಡಿವೈಎಫ್ಐ ಮತ್ತು ದಲಿತ ಹಕ್ಕುಗಳ ಹೋರಾಟ ಸಮಿತಿ ಆಶ್ರಯದಲ್ಲಿ ದೂರು ನೀಡಿದಾಗ, ಸ್ಥಳೀಯಾಡಳಿತಕ್ಕೆ ಸೂಚಿಸುವ ಭರವಸೆ ನೀಡಿದ್ದಾರೆ. ಆದರೆ ಈವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಅನ್ನುವ ಆರೋಪ ಅಬ್ಬಂಜರ ದಲಿತ ಕಾಲನಿ ನಿವಾಸಿಗಳದ್ದಾಗಿದೆ. ಮಳೆಗಾಲದಲ್ಲಿ ಮನೆಯೊಂದರಲ್ಲಿ ಇರುವ ಬಾವಿ ನೀರು ಆಶ್ರಯಿಸಲಾಗುತ್ತಿದೆ.
ಮಾರ್ಚ್ ತಿಂಗಳು ಬಂತೆಂದರೆ ಕಲುಷಿತ ನೀರನ್ನು ಕುಡಿದು ಬದುಕುವ ಸ್ಥಿತಿಯಿದೆ. ಒಂದೇ ತಿಂಗಳಲ್ಲಿ 25 ಮನೆಗಳಲ್ಲಿರುವ ಮಕ್ಕಳು ಸೇರಿದಂತೆ ಹಿರಿಯರಲ್ಲಿ ಅನಾರೋಗ್ಯ ಉಂಟಾಗಿದೆ. ಈ ಬಗ್ಗೆ ತಿಳಿಸಿದರೂ ನಗರಸಭೆ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ದಲಿತರೆಂದರೆ ಕಡೆಗಣಿಸುತ್ತಿದ್ದಾರೆ ಎಂದು ಮಹಿಳೆಯರ ಆರೋಪ. ವಾರದ ಹಿಂದೆ ಸ್ಥಳದಲ್ಲಿ ಶಿಲಾನ್ಯಾಸಕ್ಕೆಂದು ಬಂದಿದ್ದ ಸಚಿವರಲ್ಲಿಯೂ ನೀರಿನ ಸಮಸ್ಯೆ ಕುರಿತು ನಿವಾಸಿಗಳು ಅಲವತ್ತುಕೊಂಡಿದ್ದರು. ಸ್ಥಳದಲ್ಲೇ ನಗರಸಭೆಯ ಅಧಿಕಾರಿಗಳಿಗೆ ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಪೂರೈಸುವಂತೆ ಸೂಚಿಸಿದ್ದರು. ವಾರ ಕಳೆದರೂ ಟ್ಯಾಂಕರ್ ನೀರು ಬಾರದೆ, ಕಲುಷಿತಗೊಂಡ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ವಾರ್ಡ್ ಸದಸ್ಯರಲ್ಲಿ ದೂರಿದರೂ ಸ್ಪಂಧಿಸದಿರುವುದು ತೀವ್ರ ಅಸಮಾಧಾನ ಉಂಟು ಮಾಡಿದೆ. ವಾರದೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಡಿವೈಎಫ್ ಐ ನೇತೃತ್ವದಲ್ಲಿ ಉಳ್ಳಾಲ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡೆ ಪದ್ಮಾವತಿ.ಯಸ್ ಶೆಟ್ಟಿ ಹೇಳಿದ್ದಾರೆ.
ನಗರಸಭೆಯ 18ನೇ ವಾರ್ಡ್ ಅಬ್ಬಂಜರದ ದಲಿತ ಕಾಲನಿಯಲ್ಲಿ ಹಲವು ವರ್ಷಗಳಿಂದ ನೀರಿನ ಸಮಸ್ಯೆಯ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡುತ್ತಾ ಬಂದಿದ್ದೇವೆ. ಜಿಲ್ಲಾಧಿಕಾರಿಯೂ ಸ್ಪಂಧಿಸುತ್ತಿಲ್ಲ. ನಗರಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.22 ರಷ್ಟು ಅನುದಾನವಿದ್ದರೂ, ನೀರಿನ ಟ್ಯಾಂಕ್ ದುರಸ್ತಿಗೆ ಅನುದಾನದ ಕೊರತೆ ಇರುವ ಬಗ್ಗೆ ತಿಳಿಸುತ್ತಾ ಬಂದಿದ್ದಾರೆ. ನಗರಸಭೆಗೆ ದಲಿತರ ಹೆಸರಿನಲ್ಲಿ ಬರುವ ಅನುದಾನವನ್ನು ಎಲ್ಲಿಗೆ ಖರ್ಚು ಮಾಡುತ್ತಿದ್ದಾರೆ ಅನ್ನುವುದು ಪ್ರಶ್ನೆಯಾಗಿದೆ. ಸ್ಥಳಕ್ಕೆ ಬರುವ ಅಧಿಕಾರಿಗಳೂ ನೋಡಿ ಹೋಗುತ್ತಾರೆ. ಕೂಡಲೇ ಅಬ್ಬಂಜರ ನಿವಾಸಿಗಳ ಸಮಸ್ಯೆಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಿ, ಪರಿಹರಿಸಬೇಕಿದೆ.
ರೋಹಿದಾಸ್
ದಲಿತ ಹಕ್ಕುಗಳ ಹೋರಾಟ ಸಮಿತಿ
ಉಳ್ಳಾಲ ವಲಯ
25 ವರ್ಷಗಳ ಸಮಸ್ಯೆಯಾಗಿದೆ. ದೂರು ನೀಡದರೂ ಸಂಬಂಧಪಟ್ಟವರು ಪಡೆಯುತ್ತಿಲ್ಲ . ಎರಡು ದಿನಕ್ಕಾದರೂ ಟ್ಯಾಂಕರ್ ನೀರು ಕಳುಹಿಸಿಕೊಡಬೇಕಾಗಿದೆ. ಬೋರ್ ವೆಲ್ ನೀರು ಹಳದಿ ಬಣ್ಣ ತಾಳಿದೆ. 8 ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ. ಇನ್ನೆಷ್ಟು ಮಂದಿ ರೋಗಗ್ರಸ್ಥರಾಗುತ್ತಾರೋ ಅನ್ನುವ ಆತಂಕವಿದೆ. ಪಾತ್ರೆಯಲ್ಲೇ ಹಳದಿ ಬಣ್ಣ ಪಡೆಯುತ್ತಿದೆ. ಹೊಟ್ಟೆಗೆ ಹೋದರೆ ಯಾವ ಸ್ಥಿತಿಯಿದೆ. ಸ್ಥಳೀಯ ಕೌನ್ಸಿಲರ್ ಟ್ಯಾಂಕರಿನ ನೀರು ಕಳುಹಿಸುತ್ತೇವೆ ಅನ್ನುತ್ತಾ ಬಂದಿದ್ದಾರೆ. ಆದರೆ ಅವರ ನೀರು ಬರುವಾಗ ಇಲ್ಲಿ ಹಲವು ಹೆಣಗಳು ಬೀಳುವುದರಲ್ಲಿ ಸಂಶಯವಿಲ್ಲ.
ಕಲಾವತಿ
ಸ್ಥಳೀಯರು
ನೀರಿನ ಸಮಸ್ಯೆ ಪರಿಹಾರ ನೀಡುವುದಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ವಾರದೊಳಗೆ ಸಮಸ್ಯೆ ಬಗೆಹರೆಯದಿದ್ದಲ್ಲಿ ನಗರಸಭೆ ಎದುರುಗಡೆ ಇಲ್ಲಿನ ನಿವಾಸಿಗಳು, ಡಿವೈಎಫ್ಐ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಪದ್ಮಾವತಿ.ಯಸ್.ಶೆಟ್ಟಿ
ಡಿವೈಎಫ್ ಐ ಮುಖಂಡೆ
ಹಲವು ವರ್ಷಗಳಿಂದ ಬೆಳಿಗ್ಗೆ ಮತ್ತು ಸಂಜೆ ನೀರು ಬಿಡುವ ಕೆಲಸ ಮಾಡುತ್ತಿದ್ದೇನೆ. ಆದರೆ ಹಿಂದೆ ರೂ. 500 ವೇತನ ನೀಡುತ್ತಿದ್ದ ನಗರಸಭೆ ಇದೀಗ 500 ಏರಿಕೆ ಮಾಡಿ ಕೇವಲ ರೂ. 1,000 ನೀಡುತ್ತಿದೆ. ಟ್ಯಾಂಕ್ ಅವ್ಯವಸ್ಥೆಯಿಂದ ನೀರು ಬಿಡಲು ಹೆದರಿಕೆಯಾಗುತ್ತಿದೆ. ವಿದ್ಯುತ್ ವೈರ್ ಕೂಡಾ ನೆಲದಲ್ಲೇ ಹಾದುಹೋಗಿದೆ. ನೀರಿನ ಸ್ವಿಚ್ ಹಾಕಿದರೂ ಪಂಪ್ ಅವ್ಯವಸ್ಥೆಯಿಂದ ಆಗಾಗ್ಗ ಟ್ರಿಪ್ ಆಗುತ್ತಲೇ ಇರುತ್ತವೆ.
ಸಾವಿತ್ರಿ
ನೀರು ಬಿಡುವವರು


