UN NETWORKS
ಉಳ್ಳಾಲ: ಉಳ್ಳಾಲ ಸಮುದ್ರತೀರದಲ್ಲಿ ಅಲೆಗಳ ರಭಸ ಶುಕ್ರವಾರ ಮಧ್ಯಾಹ್ನದಿಂದ ಹೆಚ್ಚಾಗಿದ್ದು, ಮೀನುಗಾರಿಕೆಗೆ ತೆರಳಿರುವ ದೋಣಿಗಳು ವಾಪಸ್ಸಾಗುತ್ತಿದ್ದಾರೆ.
ಜೋರಾಗಿ ಬೀಸುತ್ತಿರುವ ಗಾಳಿಯಿಂದ ಮುಳುಗಡೆಯಾಗಿರುವ ಬಾರ್ಜ್ ಮೇಲೆತ್ತುವ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಮಧ್ಯಾಹ್ನದಿಂದಲೇ ದೋಣಿ ಮೂಲಕ ವಾಪಸ್ಸಾಗಿದೆ.
ಉಳ್ಳಾಲದ ಮೊಗವೀರಪಟ್ನ, ಸುಭಾಷನಗರ, ಕೋಟೆಪುರ, ಮುಕ್ಕಚ್ಚೇರಿ, ಕೈಕೋ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಸಮುದ್ರದ ಅಲೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಜೋರಾಗಿ ಬೀಸುತ್ತಿರುವ ಗಾಳಿಯಿಂದ ಮೀನುಗಾರಿಕೆಗೆ ತೆರಳಿರುವ ಮೀನುಗಾರ ದೋಣಿಗಳು ಸಂಜೆ ವೇಳೆ ವಾಪಸ್ಸಾಗಿದೆ. ಆಳಸಮುದ್ರದಲ್ಲಿ ಗಾಳಿ ಬೀಸುತ್ತಿರುವುದರಿಂದ ಅಪಾಯದ ಮುನ್ಸೂಚನೆ ಅರಿತು ವಾಪಸ್ಸಾಗುತ್ತಿದ್ದಾರೆ.
2017ರ ಜೂ. 4 ರಂದು ಕಡಲ್ಕೊರೆತ ಶಾಶ್ವತ ತಡೆಗೋಡೆಯ ಕಾಮಗಾರಿ ನಡೆಸುತ್ತಿದ್ದ ಬಾರ್ಜ್ ಮುಳುಗಡೆಯಾಗಿತ್ತು. ಅದರಲ್ಲಿದ್ದ 27 ಮಂದಿ ಕಾರ್ಮಿಕರನ್ನು ಕರಾವಳಿ ಕಾವಲು ಪಡೆ ರಕ್ಷಿಸಿತ್ತು. ಸಮುದ್ರದ ಅಲೆಗಳ ಅಬ್ಬರಕ್ಕೆ ತಡೆಗೋಡೆಯ ಕಲ್ಲುಗಳ ಮೇಲೆ ಸಿಲುಕಿದ್ದ ಬಾರ್ಜ್ ಮೇಲೆತ್ತುವ ಕಾರ್ಯ ಅಸಾಧ್ಯವಾಗಿತ್ತು. 2018ರ ಮಾರ್ಚ್ ತಿಂಗಳಿನಿಂದ ಬಾರ್ಜ್ ಒಳಗಡೆಯಿರುವ ಸೊತ್ತುಗಳನ್ನು ಖಾಲಿ ಮಾಡುವ ಕೆಲಸ ಆರಂಭವಾಗಿದೆ. ಶುಕ್ರವಾರ ಮತ್ತೆ ಸಮುದ್ರದಲ್ಲಿ ಜೋರಾಗಿ ಬೀಸುತ್ತಿರುವ ಗಾಳಿಯಿಂದ ಮತ್ತು ಬಾರ್ಜ್ ಮತ್ತೆ ಕಲ್ಲುಗಳಿಗೆ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆ ಎಲ್ಲರೂ ವಾಪಸ್ಸಾಗಿದ್ದಾರೆ.
ಓಖಿ ಚಂಡಮಾರುತದ ಸಂದರ್ಭ ಸಂಜೆ ನಂತರ ಕಡಲಬ್ಬರ ಜೋರಾಗಿ ಒಂಭತ್ತುಕೆರೆ ಸಮೀಪ ಎರಡು ಮನೆಗಳು ಸಂಪೂರ್ಣ ಸಮುದ್ರಪಾಲಾಗಿತ್ತು. ಇದೀಗ ಮತ್ತೆ ಚಂಡಾಮಾರುತದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಮುದ್ರ ಬಿರುಸುಗೊಳ್ಳುವ ಆತಂಕವಿದೆ. ಸಮುದ್ರ ತೀರದ ಎಲ್ಲರೂ ಜಾಗೃತರಾಗಿದ್ದೇವೆ ಎಂದು ಮೀನುಗಾರ ಮೊಗವೀರಪಟ್ನದ ಯೊಗೀಶ್ ತಿಳಿಸಿದ್ದಾರೆ.


