UN NETWORKS
ತಲಪಾಡಿ: ತಲಪಾಡಿಯಲ್ಲಿ ಬಸ್ಸಿನಿಂದ ಎಳೆದು ಹಾಕಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ತಲಪಾಡಿ ನಾರ್ಲ ಪಡಿಲ್ ನಿವಾಸಿ ಜೀವನ್ ಡಿ’ಸೋಜ (23), ಮೈಕಲ್ ಯಾನೆ ಕಿಶೋರ್ (20) , ಮಂಜೇಶ್ವರ ಕುಂಜತ್ತೂರು ನಿವಾಸಿ ಶೋಬಿತ್(20) , ಕುಂಜತ್ತೂರು ಕೊಚ್ಚಿಕಾಡ್ ನಿವಾಸಿ ನಿಕೇಶ್(19) ಎಂಬವರು ಬಂಧಿತರು.ನಾಲ್ವರನ್ನು ಉಳ್ಳಾಲ ಠಾಣಾಧಿಕಾರಿಯ ನೇತೃತ್ವದ ತಂಡ ಕೋಟೆಕಾರ್ ಬೀರಿ ಎಂಬಲ್ಲಿಂದ ಬಂಧಿಸಿದ್ದಾರೆ.
ನಾಲ್ವರು ಫೆ.17 ರಂದು ತಲಪಾಡಿಯಲ್ಲಿ ಬಸ್ಸಿನೊಳಗಡೆ ಕುಳಿತಿದ್ದ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ , ಕುಂಜತ್ತೂರು ನಿವಾಸಿ ಅಹಮ್ಮದ್ ಇಮ್ರಾನ್ ಮತ್ತು ಫೈಝಲ್ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೀಟಿನ ವಿಚಾರಕ್ಕೆ ಸಂಬಂಧಿಸಿ ತಂಡ ವಿದ್ಯಾರ್ಥಿ ಗಳ ಮೇಲೆ ದಾಳಿ ನಡೆಸಿತ್ತು. ಅದರಂತೆ ಅಪರಾಧ ಪ್ರಕರಣ ಕಾಯ್ದೆ 143, 147, 148, 341,504, 324 ,323,506, 307 ಜತೆಗೆ 149 ಪ್ರಕಾರ ಪ್ರಕರಣ ದಾಖಲಾಗಿತ್ತು.
ಪತ್ತೆ ಕಾರ್ಯಾಚರಣೆ ಯಲ್ಲಿ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ , ಉಪ ನಿರೀಕ್ಷಕ ವಿನಾಯಕ ತೋರಗಲ್, ಮತ್ತು ಎಎಸ್ ಐ ವಿಶ್ವನಾಥ ರೈ, ಜಿಲ್ಲಾ ಉಪವಿಭಾಗದ ರೌಡಿ ನಿಗ್ರಹ ದಳದ ಮೋಹನ್, ರಾಜಾರಾಂ, ಇಕ್ಬಾಲ್, ಚಿದಾನಂದ, ವಾಸುದೇವ ಎಂಬವರು ಭಾಗವಹಿಸಿದ್ದರು.


