ಉಳ್ಳಾಲ ಡೆಸ್ಕ್
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ ಕರ್ನಾಟಕ ಇತಿಹಾಸ ಕಾಂಗ್ರೆಸ್‍ನ 24ನೇ ಅಧಿವೇಶನದ ಉದ್ಘಾಟನೆ ಗುರುವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೆಹಲಿ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಹಾಗೂ ಮಾಜಿ ಪ್ರದಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಪ್ರೊ.ಉಪಿಂದರ್ ಸಿಂಗ್ ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಇಂದು ಮಧ್ಯಯುಗದ ಅಗಾಧವಾದ ಬೌದ್ಧಿಕ ಉತ್ಸಾಹ ಮತ್ತು ಸೃಜನಶೀಲ ಉತ್ಪಾದನೆಗಳನ್ನು ವಾಸ್ತವವಾಗಿ ಚರ್ಚೆಯಿಂದ ದೂರ ಉಳಿಸಲಾಗುತ್ತಿದೆ. ಆದ್ದರಿಂದ ಬೌಧಿಕ ಇತಿಹಾಸವನ್ನು ಉತ್ಪ್ರೇಕ್ಷೆ ಮಾಡದೆ ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಚಿಂತನೆ, ಅಧ್ಯಯನಗಳು ನಡೆಯಬೇಕು ಎಂದು ಅವರು ಹೇಳಿದರು.
ಭಾರತದ ಇತಿಹಾಸವು ಅಭೂತಪೂರ್ವವಾದುದು. ಭಾರತದ ವಿವಿಧ ಭಾಗಗಳಲ್ಲಿರುವ ಶಿಲಾಶಾಸನವನ್ನು ಶೋಧಿಸಿ ಅಧ್ಯಯನ ಮಾಡಲು ನೈಪುಣ್ಯತೆ ಇರುವ ಯುವ ಇತಿಹಾಸತಜ್ಞರ ಅನಿವಾರ್ಯತೆ ಇದೆ .
ತತ್ವಶಾಸ್ತ್ರದ ಮಾಹಿತಿಗಳು, ಧಾರ್ಮಿಕ ವಿಚಾರಗಳು, ರಾಜಕೀಯ ಚಿಂತನೆ, ವಿಜ್ಞಾನ ಮತ್ತು ವೈದ್ಯಕೀಯ ಇತಿಹಾಸ ಅಥವಾ ಯಾವುದೇ ಸಾಮಾನ್ಯ ಸಾಂಸ್ಕೃತಿಕ ಪರಿಕಲ್ಪನೆಗಳಿರುವ ವಿಶ್ವದ ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿರುವ ವಿಚಾರಗಳನ್ನು ಗುರುತಿಸುವಂತಹ ಕೆಲಸ ಇಂದಿನ ಯುವ ಇತಿಹಾಸಕಾರದಿಂದ ಆಗಬೇಕಿದೆ. ಪುರಾತತ್ವ ಶಾಸ್ತ್ರದಲ್ಲಿ ಭಾರತದ ಇತಿಹಾಸವನ್ನು ತಿಳಿಯಲು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಳ್ಳುವುದು ಮಹತ್ವ ಎನಿಸುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಜಿ.ರಾಮನಾಥನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರೊ.ಬಿ.ಎನ್.ನಾಯ್ಡು, ಮಂಗಳೂರು ವಿ.ವಿ.ಕುಲಪತಿ ಪ್ರೊ.ಕೆ.ಬೈರಪ್ಪ, ಕರ್ನಾಟಕ ಇತಿಹಾಸ ಕಾಂಗ್ರೆಸ್‍ನ ಅಧ್ಯಕ್ಷರಾದ ಪ್ರೊ.ರಾಜಣ್ಣ ಉಪಸ್ಥಿತರಿದ್ದರು. ಮಂಗಳೂರು ವಿ.ವಿ.ಯ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಲೋಕೇಶ್ ಸ್ವಾಗತಿಸಿದರು.








