UN NETWORKS
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕುದ್ರೋಳಿಯ ಜಾತ್ಯತೀತ ದೇಗುಲಕ್ಕೆ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಬಂದಿದ್ದು ನಾರಾಯಣ ಗುರುಗಳಿಗೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ. ಅವರು ಸೌಹಾರ್ದತೆಗಾಗಿ ಕರ್ನಾಟಕ ವತಿಯಿಂದ ಮಂಗಳವಾರ ನೆಹರೂ ಮೈದಾನದ ಆಯೋಜಿಸಿದ್ದ ಮಾನವ ಸರಪಳಿಯಲ್ಲಿ ಭಾಗವಹಿಸಿ ನಂತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಬಿಲ್ಲವ ಯುವಕರ ಸಾವಿಗೆ ಹಾಗೂ ಅವರು ಜೈಲು ಸೇರಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾಗಿರುವ ಪ್ರಭಾಕರ ಭಟ್ ಜತೆ ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕೈ ಜೋಡಿಸಿದ್ದಾರೆ. ಇವರು ಸ್ವಾರ್ಥ, ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ ಸೈದ್ಧಾಂತಿಕವಾಗಿ ಅವರು ಜತೆ ರಾಜಿ ಆಗಿದ್ದಾರೆ ಎಂದರು.
ಪ್ರಭಾಕರ ಭಟ್ ವಿರುದ್ಧ ಮಾತನಾಡಲು ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಿಂದೆಟು ಹಾಕುತ್ತಾರೆ. ಯಾಕೆ ಎಂಬುದು ಗೊತ್ತಿಲ್ಲ.
ಭಟ್ ಏನು ಪ್ರಧಾನಿಯಾ? ರಾಷ್ಟ್ರಪತಿಯಾ? ಎಂದ ಅವರು ಪ್ರಭಾಕರ ಭಟ್ ಯಾರು ಎಂದು ತಿಳಿಯಲು ಇತಿಹಾಸ ಓದಿ ತಿಳಿದುಕೊಳ್ಳಬೇಕಾಗಿಲ್ಲ. ಈಚೆಗೆ ಅವರು ಮಾಡಿದ ಭಾಷಣಗಳನ್ನು ಕೇಳಿದರೆ ಯಾರು ಎಂಬುದು ತಿಳಿಯುತ್ತದೆ ಎಂದು ಹೇಳಿದರು.


