UN NETWORKS
ಕೊಣಾಜೆ: ಯಕ್ಷಗಾನವು ಒಂದು ತೂಕದ ಕಲೆ. ಹಾಗಾಗಿ ಈ ರಂಗಭೂಮಿಯಲ್ಲಿ ತೂಕದ ಬಣ್ಣಗಳನ್ನು, ವೇಷಭೂಷಣಗಳನ್ನು, ಮಾತುಗಳನ್ನು ಕಲಾವಿದರು ಪ್ರಸ್ತುತಪಡಿಸುತ್ತಾರೆ.
ತೂಕ ಎಂಬುದು ವಿಶಿಷ್ಟವಾದ ಅರ್ಥವಿರುವ ಒಂದು ಪರಿಭಾಷೆ. ಯಕ್ಷಗಾನ ಹೊಂದಿರುವ ತೂಕದ ಪರಿಕರಗಳ ಸ್ವರೂಪ ಮತ್ತು ಬಳಕೆಯ ಕುರಿತಂತೆ ಪ್ರಕಟವಾಗಿರುವ ಸಾಹಿತ್ಯವನ್ನು ಶಿಬಿರಾರ್ಥಿಗಳು ಅಧ್ಯಯನ ಮಾಡಬೇಕು ಮತ್ತು ಕಲಿತ ಯಕ್ಷಗಾನವನ್ನು ಪ್ರದರ್ಶನ ಮಾಡುವಾಗ ಅದನ್ನು ಅನುಭವಿಸುವ ಮನೋಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ವಿವಿ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ ಅವರು ಹೇಳಿದರು.
ಅವರು ಮಂಗಳೂರು ವಿವಿಯ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ನಡೆದ `ಯಕ್ಷ ವರ್ಣ ವೈಭವ’ ಒಂದು ದಿನದ ಬಣ್ಣಗಾರಿಕೆ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಗವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು.
ಯಕ್ಷಗಾನದಲ್ಲಿ ಬೆಳೆಸುವ ಬಣ್ಣಗಾರಿಕೆಗೂ ಪಾತ್ರಗಳ ಮನೋಧರ್ಮಕ್ಕೂ ನಿಕಟವಾದ ಸಂಬಂಧವಿದೆ. ಮುಖವರ್ಣಿಕೆಗೆ ಸಂಬಂಧಪಟ್ಟಂತೆ ಬಳಸುವ ಪದಗಳಲ್ಲಿಯೇ ಬಣ್ಣ ಹಾಕುವ, ಗೆರೆ ಎಳೆಯುವ, ಮುದ್ರೆಗಳನ್ನು ಬಿಡಿಸುವ ಕುರಿತ ಸೂಚನೆಗಳಿವೆ ಎಂದು ಹೇಳಿದರು.
ಬಣ್ಣಗಾರಿಕೆ ಶಿಬಿರದ ನಿರ್ದೇಶಕ ಸದಾಶಿವ ಶೆಟ್ಟಿಗಾರ್ ಕಿನ್ನಿಗೋಳಿ ಅವರು ಮಾತನಾಡಿ, ಬಣ್ಣಗಾರಿಕೆಯ ತರಬೇತಿಯು ಒಂದು ದಿವಸದಲ್ಲಿ ಮುಗಿಯುವಂತಹದಲ್ಲ. ಅದು ನಿರಂತರವಾಗಿ ಕಲಿಯಬೇಕಾದ ಕಲೆ. ಶಿಬಿರದಲ್ಲಿ ಕಲಿತ ವಿದ್ಯೆಯನ್ನು ಮುಂದುವರಿಸಿಕೊಂಡು ಹೋಗುವ ಜವಬ್ಧಾರಿ ಶಿಬಿರಾರ್ಥಿಗಳ ಮೇಲಿದೆ ಎಂದು ಹೇಳಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ರಾಜಶ್ರೀ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


