ಉಳ್ಳಾಲ: ಶಿಕ್ಷಕ ವೃತ್ತಿಯು ಪವಿತ್ರವಾದುದು, ಶ್ರೇಷ್ಠವಾದುದು. ಶಿಕ್ಷಕ ವೃತ್ತಿಗೆ ಸಮಾನವಾದ ವೃತ್ತಿಯು ಬೇರೊಂದಿಲ್ಲ. ಶಿಕ್ಷಕರು ತನ್ನ ಬಳಿಬರುವ ಎಲ್ಲ ಮಕ್ಕಳನ್ನು ಸಮಾನವಾಗಿ ನೋಡಬೇಕು.
ತನ್ನ ಸೇವೆಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು. ಎಸ್. ಹಂಝರವರು ಹೇಳಿದರು.
ಹಳೆಕೋಟೆ ಸಯ್ಯಿದ್ ಮದನಿ ವಿದ್ಯಾ ಸಂಸ್ಥೆಗಳ ಶಿಕ್ಷಕ ವೃಂದದ ಆಶ್ರಯದಲ್ಲಿ ಮಂಗಳೂರು ಟೀಚರ್ಸ್ ಕೋ-ಅಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಎಂ.ಕೆ. ಮಂಜನಾಡಿ ಹಾಗೂ ನಿರ್ದೇಶಕರಾಗಿ ಆಯ್ಕೆಯಾದ ಎಂ. ಹೆಚ್. ಮಲಾರ್, ಪಿ.ಹೆಚ್. ಹಮೀದ್, ಹಿಲ್ಡಾ ಕ್ಲಮಂಸಿಯಾ ಪಿಂಟೋ ಅವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಪ್ರಾಮಾಣಿಕ ಶಿಕ್ಷಕರಿಗೆ ಗೌರವವು ತಾನಾಗಿಯೇ ಬರುತ್ತದೆ ಎಂದು ಹೇಳಿದರು.
ಶಿಕ್ಷಕರು ಉರಿಯುತ್ತಿರುವ ದೀಪವಾಗಿದ್ದು ಸತತ ಅಭ್ಯಾಸವೆಂಬ ಎಣ್ಣೆಯಿಂದ ಅದು ಪ್ರಜ್ವಲಿಸಬೇಕು. ಸದಾ ಶೈಕ್ಷಣಿಕ ರಂಗದಲ್ಲಿ ಸಕ್ರಿಯರಾಗಿರುವ ಶಿಕ್ಷಕರಿಗೆ ಸಂದ ಗೌರವ ಅದಾಗಿರುತ್ತದೆ ಎಂದು ಮಂಗಳೂರು ತಾಲೂಕು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಜಮಾಅತ್ ಉಪಾಧ್ಯಕ್ಷ ಅಶ್ರಪ್ ಅಹಮದ್ ರೈಟ್ ವೇ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ಉಳ್ಳಾಲ ಪುರಸಭೆಯ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಶಾಲಾ ಸಂಚಾಲಕ ಯು.ಹಚ್. ಮಹಮ್ಮದ್ ಹಳೆಕೋಟೆ, ಅಳೇಕಲ ಮಸ್ಜಿದ್ ಅಧ್ಯಕ್ಷ ಇಸ್ಮಾಯಿಲ್ ಅಳೇಕಲ, ಮಸ್ಜಿದ್ ಅಲ್ ಕರೀಂ ಅಧ್ಯಕ್ಷ ಮುಹಮ್ಮದ್ ತ್ವಾಹ, ಶಾಲಾ ಉಪಾಧ್ಯಕ್ಷ ಯು.ಎನ್ ಇಬ್ರಾಹಿಂ, ಕೌನ್ಸಿಲರ್ ಫಾರೂಕ್ ಯು.ಹೆಚ್.ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಟಿಪ್ಪು ಸುಲ್ತಾನ್ ಕಾಲೇಜಿನ ಪ್ರಾಂಶುಪಾಲ ಡಿ. ಬಿ. ಮೊೈದೀನ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಇಬ್ರಾಹಿಂ, ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮಹಮ್ಮದ್ ರಫೀಕ್ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಕೆ.ಎಂ.ಕೆ. ಮಂಜನಾಡಿ ಸ್ವಾಗತಿಸಿದರು. ಶಿಕ್ಷಕಿ ಅರುಣಾಕ್ಷಿ ವಂದಿಸಿದರು. ಪ್ರೌಢ ಶಾಲಾ ಶಿಕ್ಷಕಿ ಸಪ್ನಾ ಅಭಿನಂದನಾ ಭಾಷಣ ಮಾಡಿದರು.



