UN NETWORKS
ಮಂಗಳೂರು: ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯಿದೆ, ವಾರದ ರಜೆ, ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಗುರುತಿನ ಚೀಟಿ, ಲೈಂಗಿಕ ದೌರ್ಜನ್ಯ , ಜಾತೀಯತೆ ತಡೆಗಟ್ಟುವಿಕೆ, ಬಿಪಿಎಲ್ ಪಡಿತರ ಸಿಗುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಸ್ತ್ರೀ ಜಾಗೃತಿ ಸಮಿತಿ ಮುಖಂಡೆ ಹಾಗೂ ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟದ ಸಲಹೆಗಾರರಾದ ಬೆಂಗಳೂರಿನ ಗೀತಾ ಮೆನನ್ ಹೇಳಿದ್ದಾರೆ.
ಅವರು ಗೃಹ ಕಾರ್ಮಿಕರ ಒಕ್ಕೂಟದ ವತಿಯಿಂದ ಕುಂಜತ್ತಬೈಲಿನಿಂದ ಕಾವೂರು ಜಂಕ್ಷನ್ನಿನವರೆಗೆ ಜಾಥಾ ಮತ್ತು ಕಾರ್ಮಿಕರ ಮಾನವ ಸರಪಳಿ ಸರಕಾರವನ್ನು ಒತ್ತಾಯಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗೃಹಕಾರ್ಮಿಕರು ಜೀತದ ಆಳುಗಳಲ್ಲ, ಯಂತ್ರಗಳು ಅಲ್ಲ. ಎಲ್ಲರಂತೆ ಕಾರ್ಮಿಕರೆಂದು ಸಮಾಜ ಗುರುತಿಸಿ ಗೌರವಿಸಬೇಕಾಗಿದೆ. ಸಣ್ಣ ಮೌಲ್ಯಕ್ಕೆ ಮನೆಕೆಲಸ ನಿರ್ವಹಿಸುವ ಮಹಿಳೆಯರನ್ನು ಅತ್ಯಂತ ತಾತ್ಸಾರ ಭಾವನೆಯಿಂದ ನೋಡಲಾಗುತ್ತಿದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ ಓ) ಮನೆಕೆಲಸ ಗೌರವದ ಕೆಲಸ ಎಂದು ಘೋಷಿಸಿದೆ.
ಗೃಹ ಕಾರ್ಮಿಕರೂ ಇತರ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕೊಡಬೇಕು ಎಂದು ನಿರ್ಧರಿಸಲಾಗಿತ್ತು. ಮಂಗಳೂರಿನಲ್ಲಿ ಗೃಹ ಕಾರ್ಮಿಕರ ಸಂಖ್ಯೆ ಅಪಾರವಾಗಿದೆ. ಎಲ್ಲರೂ ವೇತನ ತಾರತಮ್ಯ, ವಾರದ ರಜೆ ಇಲ್ಲದಿರುವುದು, ಅನಾರೋಗ್ಯ ಸಮಯದಲ್ಲಿ ಸೌಲಭ್ಯವಿಲ್ಲ, ಬೋನಸ್ ಸಮಸ್ಯೆ, ವಲಸೆ ಕಾರ್ಮಿಕರಿಗೆ ದಾಖಲೆಗಳ ಕೊರತೆ , ಗುರುತಿನ ಚೀಟಿಯಿಲ್ಲದೆ ಭದ್ರತೆಯಿಲ್ಲ, ಪೊಲೀಸರ ಸಮಸ್ಯೆ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಇಲಾಖೆ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಮಂಗಳೂರಿನ ಸ್ತ್ರೀ ಜಾಗೃತಿ ಸಮಿತಿ ಕಾರ್ಯಕರ್ತೆ ಸಂಶಾದ್, ಗೃಹ ಕಾರ್ಮಿಕರ ಕಾರ್ಯಕರ್ತೆ ಗೀತಾ, ರತನ್, ಸುಂಕದಕಟ್ಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಲತಾ, ಸಮಾಜ ಸೇವಕಿ ಹರಿಣಿ ಮುಂತಾದವರು ಉಪಸ್ಥಿತರಿದ್ದರು.


