UN NETWORKS
ಕೊಣಾಜೆ: ಯಕ್ಷಗಾನ ಕಲೆಯು ಕರಾವಳಿಯ ಜನರಲ್ಲಿ ಆಳವಾಗಿ ನೆಲೆವೂರಿದೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಪೌರಣಿಕ ಕಲೆಗಳು ವಿನಾಶದತ್ತ ಮುಖಮಾಡಿ ನಿಂತಿದ್ದರೂ ಕರಾವಳಿಯಲ್ಲಿ ಯಕ್ಷಗಾನವು ಇಂದಿಗೂ ಸಮೃದ್ಧವಾಗಿದೆ. ಕರಾವಳಿ ಜನತೆಯ ಕಲಾಪ್ರೀತಿಯೇ ಇದಕ್ಕೆ ಕಾರಣವೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಹೇಳಿದರು.
ಅವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ `ಯಕ್ಷ ವರ್ಣ ವಿನ್ಯಾಸ’ ಒಂದು ದಿನದ ಬಣ್ಣಗಾರಿಕೆ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ನಾಟಕ ಮತ್ತು ಸಿನಿಮಾ ರಂಗಗಳಲ್ಲಿನ ಪ್ರಸಾದನಾ ವಿಧಾನಕ್ಕಿಂತ ಭಿನ್ನವಾಗಿ ಕಲಾವಿದನೇ ಬಣ್ಣಗಾರಿಕೆಯನ್ನು ಮಾಡುವ ವಿಶಿಷ್ಟತೆಯು ಯಕ್ಷಗಾನದಲ್ಲಿದೆ. ಬಣ್ಣಗಾರಿಕೆ ಕೇವಲ ಕಲಾತ್ಮಕ ಮಾತ್ರವಲ್ಲದೆ ಅದು ಪಾತ್ರದ ವ್ಯಕ್ತಿತ್ವವನ್ನು ಅಭಿವ್ಯಕ್ತಿಸುವುದು ಹಾಗೂ ಸಾಂಕೇತಿಕ ಧ್ವನಿಯನ್ನು ಹೊಂದಿದೆ. ಮಂಗಳೂರು ವಿಶ್ವವಿದ್ಯಾನಿಲಯವು ಕ್ರೀಡೆ ಮತ್ತು ಸಾಂಸ್ಕೃತಿಕ ರಂಗಗಳಿಗೆ ವಿಶೇಷ ಉತ್ತೇಜನ ನೀಡುತ್ತಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರವು ಕ್ರಿಯಾತ್ಮಕವಾಗಿ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು.
ಯಕ್ಷಗಾನ ಕಲಾವಿದ ಹಾಗೂ ಉಪನ್ಯಾಸಕ ಸದಾಶಿವ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಯಕ್ಷಗಾನ ಕಲಾವಿದ ಬಣ್ಣಗಾರಿಕೆ, ಕುಣಿತ, ಅಭಿನಯ, ವಸ್ತ್ರವಿನ್ಯಾಸ, ಕುಣಿತ, ಮಾತುಗಾರಿಕೆ, ಪೌರಾಣಿಕ ಜ್ಞಾನ ಎಲ್ಲವನ್ನೂ ಅರಿತುಕೊಂಡಿರಬೇಕು. ಹಾಗಿದ್ದರೆ ಮಾತ್ರ ಕಲಾವಿದ ಪರಿಪೂರ್ಣತೆಯನ್ನು ಬೆಳೆಸಿಕೊಳ್ಳಲು ಸಾಧ್ಯ. ಯಕ್ಷಗಾನದಲ್ಲಿ ಪಾತ್ರ ಸ್ವಭಾವಕ್ಕೆ ಅನುಸಾರವಾದ ಬಣ್ಣಗಾರಿಕೆ ಇರಬೇಕು. ಆದ್ದರಿಂದ ಯಕ್ಷಗಾನದಲ್ಲಿ ಬಣ್ಣಗಾರಿಕೆಗೆ ಮಹತ್ವ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಡಾ.ರಾಜಶ್ರೀ, ಸತೀಶ್ ಕೊಣಾಜೆ, ಜೆಸ್ಸಿಮೇರಿ ಡಿಸೋಜಾ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ಪ್ರಸಾದ್ ಆಚಾರ್ಯ ಸ್ವಾಗತಿಸಿ, ಜ್ಯೋತಿ ವಂದಿಸಿದರು. ಅಮೃತಾ ಕಾರ್ಯಕ್ರಮ ನಿರೂಪಿಸಿದರು.
ಬಣ್ಣಗಾರಿಕೆ ಕಮ್ಮಟದಲ್ಲಿ ಯಕ್ಷಮಂಗಳ ವಿದ್ಯಾರ್ಥಿಗಳು ಸೇರಿದಂತೆ ಕೇಂದ್ರದ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದರು. ಕಮ್ಮಟದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಪಾತ್ರಗಳ ಮುಖವರ್ಣಿಕೆ, ಸ್ವಭಾವ ವಿವರಣೆ, ಸ್ವ-ಬಣ್ಣಗಾರಿಕೆಯ ಕೌಶಲ ತರಬೇತಿ ನೀಡಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರಾದ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು.


