UN NETWORKS
ಉಳ್ಳಾಲ: ಅಕ್ರಮವಾಗಿ ಹಸು ಮತ್ತು ಕರು ಸಾಗಾಟ ನಡೆಸುತ್ತಿದ್ದ ವಾಹನವನ್ನು ತಡೆಗಟ್ಟಿದ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ರಾಡಿನಿಂದ ದಾಳಿಗೆ ಯತ್ನಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುದುಂಗಾರುಕಟ್ಟೆ ಎಂಬಲ್ಲಿ ಸೋಮವಾರ ಮಧ್ಯಾಹ್ನ ವೇಳೆ ನಡೆದಿದ್ದು, ಬಳಿಕ ಕೊಣಾಜೆ ಪೊಲೀಸರು ವಾಹನ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೊಂಟೆಪದವಿನಿಂದ ಸಾಲೆತ್ತೂರು ಕಡೆಗೆ ಆಸೀಫ್ ಮತ್ತು ಚಾಲಕ ಸೇರಿಕೊಂಡು ಹಸು ಮತ್ತು ಕರುವನ್ನು ಸಂಪೂರ್ಣ ಮುಚ್ಚಿದ ವಾಹನದಲ್ಲಿ ಕೊಂಡೊಯ್ಯುತ್ತಿದ್ದರು. ಇದರಿಂದ ಸಂಶಯಗೊಂಡ ಹಿಂದು ಸಂಘಟನೆ ಕಾರ್ಯಕರ್ತರೊಬ್ಬರು ವಿದ್ಯಾರಣ್ಯನಗರದಲ್ಲಿ ವಾಹನವನ್ನು ಅಡ್ಡಗಟ್ಟಲು ಯತ್ನಿಸಿದ್ದರು.
ಆದರೆ ವಾಹನದಲ್ಲಿದ್ದವರು ರಾಡಿನಿಂದ ಹಲ್ಲೆಗೆ ಮುಂದಾಗಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬಜರಂಗದಳದ ತಾಲೂಕು ಗೋರಕ್ಷಾ ಪ್ರಮುಖ್ ಸೇರಿದಂತೆ ಇಬ್ಬರು ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಕೊಣಾಜೆ ಪೊಲೀಸರ ಪಿಸಿಆರ್ ವಾಹನಕ್ಕೆ ಮಾಹಿತಿ ನೀಡಿದ್ದರು.
ಬೈಕ್ ಮತ್ತು ಪಿಸಿಆರ್ ವಾಹನದಲ್ಲಿ ಜಾನುವಾರು ಸಾಗಾಟದ ವಾಹನವನ್ನು ಬೆನ್ನಟ್ಟಿ ಮುದುಂಗಾರುಕಟ್ಟೆ ಎಂಬಲ್ಲಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ವಾಹನ ಮತ್ತು ಜಾನುವಾರುಗಳನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಜಾನುವಾರು ಮಂಜನಾಡಿಯ ಹಿಂದು ವ್ಯಕ್ತಿಗೆ ಸೇರಿದ್ದಾಗಿದ್ದು, ಅವರ ತೋಟವನ್ನು ನೋಡುತ್ತಿದ್ದ ಮುಸ್ಲಿಂ ವ್ಯಕ್ತಿಯೋರ್ವರು ಬದಲಾವಣೆಗೆಂದು ಸಾಲೆತ್ತೂರಿನ ಆಸೀಫ್ ಎಂಬವರಿಗೆ ನೀಡಿದ್ದಾರೆ ಎಂದು ತಿಳಿಸಿದ್ದರು.
ಆದರೆ ವಾಹನದಲ್ಲಿ ಸರಿಯಾದ ನೋಂದಣಿ ಸಂಖ್ಯೆಯೂ ಇಲ್ಲದೆ, ದಾಖಲೆಗಳಿಲ್ಲದೆ ಇರುವುದರಿಂದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜಾನುವಾರುಗಳನ್ನು ಮರಳಿ ತೋಟದ ಮನೆಗೆ ಕಳುಹಿಸಲಾಗಿದೆ. ದಾಖಲೆಗಳಿಲ್ಲದೆ ಜಾನುವಾರು ಕೊಂಡೊಯ್ಯುವುದು ಅಕ್ರಮ, ಅಲ್ಲದೆ ಮಾಂಸಕ್ಕಾಗಿಯೇ ಜಾನುವಾರುಗಳನ್ನು ಸಾಗಾಟ ನಡೆಸಲಾಗುತಿತ್ತು ಅನ್ನುವುದು ಬಜರಂಗದಳದ ಆರೋಪವಾಗಿದೆ.


