UN NETWORKS
ಉಳ್ಳಾಲ: ಪೌಷ್ಠಿಕ ಆಹಾರಗಳ ಕುರಿತು ಹೆಚ್ಚಿನ ಅಧ್ಯಯನದ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಿದಲ್ಲಿ ಸ್ವಸ್ಥ ಭಾರತ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ಪೌಷ್ಠಿಕ ತಜ್ಞರ ಪಾತ್ರ ಬಹುಮುಖ್ಯ ಎಂದು ನಿಟ್ಟೆ (ಸ್ವಾಯುತ್ತೆಯಾಗಲಿರುವ ವಿ.ವಿ) ಉಪಕುಲಾಧಿಪತಿ ಡಾ. ಎಂ. ಶಾಂತರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಕ್ಯಾಂಪಸ್ಸಿನ ಕ್ಷೇಮ ಆಡಿಟೋರಿಯಂನಲ್ಲಿ ಶುಕ್ರವಾರ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ, ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಡಯಾಟಿಕ್ಸ್ ಆಂಡ್ ನ್ಯೂಟ್ರೀಷಿಯನ್ ವಿಭಾಗದ ಆಶ್ರಯದಲ್ಲಿ ಶುಕ್ರವಾರ ನಡೆದ ನ್ಯಾಷನಲ್ ನ್ಯೂಟ್ರೀಷಿಯನ್ ಕಾನ್ಫರೆನ್ಸ್ ` ನ್ಯೂಟ್ರಿಕಾನ್ -2018′ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ 35 ಮಿಲಿಯ ಜನ ಮಧುಮೇಹ ಮತ್ತು 32 ಮಿಲಿಯ ಜನ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ರೋಗವನ್ನು ಗುಣಪಡಿಸುವ ವಿಧಾನ ಮತ್ತು ರೋಗ ಕಂಡುಹಿಡಿಯುವ ವಿಧಾನಗಳ ಆವಿಷ್ಕಾರದಲ್ಲೇ ಮುಂದುವರಿಯುತ್ತೇವೆ. ಆದರೆ ಎಲ್ಲಿಯೂ ಪೌಷ್ಠಿಕತೆಯಿಲ್ಲದ ಆಹಾರ, ಕಲಬೆರೆಕೆ ಆಹಾರಗಳನ್ನು ಸೇವಿಸದಂತೆ ವೈದ್ಯರು ಸೂಚಿಸುತ್ತಿಲ್ಲ.
ಇದರಿಂದ ದೊಡ್ಡ ಪ್ರಮಾಣದಲ್ಲಿ ರೋಗಗಳು ಉಲ್ಬಣವಾಗುತ್ತಿದೆ. ಸರಕಾರ ಇದನ್ನು ಗಮನದಲ್ಲಿಟ್ಟುಕೊಂಡು ಸ್ವಸ್ಥ ಭಾರತ ಕಲ್ಪನೆ ಜತೆಗೆ ಪೌಷ್ಠಿಕತೆಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಗ್ರಾಮೀಣ ಭಾಗಗಳಲ್ಲಿ ಪರಿಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವ ಮೂಲಕ ಉತ್ತಮ ಹೆಜ್ಜೆಯನ್ನು ಇಟ್ಟಿದೆ. ಈ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿಯ ಜತೆಗೆ ರೋಗಗಳನ್ನು ತಡೆಗಟ್ಟಲು ಸಾಧ್ಯ. ಪೌಷ್ಠಿಕ ತಜ್ಞರ ಸಮ್ಮೇಳನ ದೇಶದಲ್ಲಿ ಇಂತಹ ಜಾಗೃತಿಯನ್ನು ಮೂಡಿಸಲು ವೇದಿಕೆಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಇಂಡಿಯನ್ ಡಯಾಟಿಕ್ಸ್ ಅಸೋಸಿಯೇಷನ್ ಬೆಂಗಳೂರು ಚಾಪ್ಟರ್ ನ ಅಧ್ಯಕ್ಷೆ ಹಾಗೂ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು (ಸ್ವಾಯತ್ತ) ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ಸಂತೋಷ್ ಮಾತನಾಡಿ ಹಲವು ವರ್ಷಗಳಿಂದ ಅಸೋಸಿಯೇಷನ್ ಪೌಷ್ಠಿಕಾಂಶಯುಕ್ತ ಆಹಾರಗಳ ಕುರಿತು ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರೋಗಗಳ ತಡೆಗಟ್ಟುವಿಕೆಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಕಾರ್ಯಕ್ರಮ ಮುಂದುವರಿದಿದೆ. ರಾಷ್ಟ್ರ ಮಟ್ಟದ ಸಮ್ಮೇಳನದಲ್ಲಿಯೂ ಎಲ್ಲರ ಸಲಹೆ ಸೂಚನೆಗಳ ಜತೆಗೆ ಚರ್ಚೆಗಳು ನಡೆಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ (ಸ್ವಾಯುತ್ತೆಯಾಗಲಿರುವ ವಿ.ವಿ) ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಆಸ್ಪತ್ರೆಗಳಲ್ಲಿ ಸಮಾಲೋಚನೆ ವಿಭಾಗ ಪರಿಣಾಮಕಾರಿಯಾಗಿ ಕಾರ್ಯಾಚರಿಸಬೇಕಿದೆ. ಈ ಮೂಲಕ ರೋಗಿಗಳ ಆಹಾರ ಸೇವನೆ ಮತ್ತು ಅದನ್ನು ಬದಲಾಯಿಸುವ ಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ವೈದ್ಯರ ಮೇಲಿದೆ ಎಂದರು.
ಡಾ.ಇಂದ್ರಾಣಿ ಕರುಣಾಸಾಗರ್ ದಿಕ್ಸೂಚಿ ಭಾಷಣ ಮಾಡಿದರು. ಸಮ್ಮೇಳನ ಆಯೋಜನ ಸಮಿತಿ ಕಾರ್ಯದರ್ಶಿ ಸೆಲ್ಲಿ.ಜೆ ಕಟ್ಟಿಕಾರನ್, ಜತೆ ಕಾರ್ಯದರ್ಶಿ ಡಾ.ಪ್ರೇರಣಾ ಹೆಗ್ಡೆ ಉಪಸ್ಥಿತರಿದ್ದರು.
ಕ್ಷೇಮ ಡೀನ್ ಹಾಗೂ ಆಯೋಜನಾ ಸಮಿತಿ ಅಧ್ಯಕ್ಷ ಡಾ.ಪಿ.ಎಸ್.ಪ್ರಕಾಶ್ ಸ್ವಾಗತಿಸಿದರು. ಕ್ಷೇಮ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹಿರೇಮಠ್ ವಂದಿಸಿದರು. ಡಿ.ರಶ್ಮಿ ಕುಂದಾಪುರ್ ಕಾರ್ಯಕ್ರಮ ನಿರೂಪಿಸಿದರು.


