UN NETWORKS
ತೊಕ್ಕೊಟ್ಟು: ಶತಮಾನೋತ್ಸವ ಸಂಭ್ರಮಕ್ಕೆ ನಗರಸಭೆಯಿಂದ ಆಗುವ ಎಲ್ಲಾ ವ್ಯವಸಸ್ಥೆಗಳನ್ನು ಕಲ್ಪಿಸಲಾಗುವುದು, ನಗರಸಭೆಯ ಸರ್ವ ಸದಸ್ಯರು ಹಾಗೂ ಅಧಿಕಾರಿ ವರ್ಗ ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದು ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು ಹೇಳಿದ್ದಾರೆ.
ಅವರು ಜ.19 ರಿಂದ 21ರ ವರೆಗೆ ಜರಗಲಿರುವ ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಉಳ್ಳಾಲ ನಗರಸಭೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮೂರು ದಿನಗಳ ಕಾಲ ನಡೆಯಲಿರುವ ಸಂಭ್ರಮಕ್ಕೆ ಮೂಲಭೂತ ವ್ಯವಸ್ಥೆಗಳನ್ನು ನಗರಸಭೆಯಿಂದ ಕಲ್ಪಿಸಲಾಗಿದೆ. ಸಭೆಯಲ್ಲಿ ಕೇಳಿಬಂದ ಬೇಡಿಕೆಗಳ ಪರಿಶೀಲನೆ ನಡೆಸಿ ಅದರ ವ್ಯವಸ್ಥೆಗೆ ನಗರಸಭೆ ಮುಂದಾಗುವುದು. ಸಾಮರಸ್ಯಯುತ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯವರು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕಿದೆ. ಆದರೆ ಹೊರಭಾಗದ ಪೊಲೀಸರನ್ನು ನಿಯೋಜಿಸುವುದರಿಂದ ಸ್ಥಳೀಯರ ಜತೆ ಅವರು ಉತ್ತಮವಾಗಿ ಸಂಪರ್ಕಿಸಲು ಸಾಧ್ಯವಾಗದೆ ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ. ಅದಕ್ಕಾಗಿ ಜಿಲ್ಲೆಯ ಪೊಲೀಸರನ್ನೇ ತಾತ್ಕಾಲಿಕವಾಗಿ ನಿಯೋಜಿಸುವುದು ಒಳಿತು ಎಂದು ನಗರಸಭೆ ಅಧ್ಯಕ್ಷರು ಪೊಲೀಸ್ ಇಲಾಖೆಗೆ ಸಲಹೆ ನೀಡಿದರು.
ಬ್ಯಾನರ್ ತೆರುವುಗೊಳಿಸಿ: ಪೊಲೀಸ್ ಇಲಾಖೆಯ ನಿರ್ದೇಶನದಂತೆ ಅಲ್ಲಲ್ಲಿ ಹಾಕಲಾಗಿರುವ (ಪ್ಲೆಕ್ಸ್ ) ಬ್ಯಾನರುಗಳನ್ನು ತೆರವುಗೊಳಿಸಬೇಕಿದೆ, ರಸ್ತೆ ಬದಿಯಲ್ಲಿರುವ ಅಂಗಡಿಗಳನ್ನು ನಾಳೆಯಿಂದ ತೆರವುಗೊಳಿಸಲಾಗುವುದು. ತೊಕ್ಕೊಟ್ಟು ಒಳಪೇಟೆಗೆ ಹೋಗುವ ರೈಲ್ವೇ ಅಂಡರ್ ಪಾಸಿಂಗ್ ಗೆ ಸುತ್ತಲೂ ಸಿಎಫ್ ಎಲ್ ಲೈಟ್ ವ್ಯವಸ್ಥೆ, ರಸ್ತೆ ಉಬ್ಬುಗಳ ಎಚ್ಚರಿಕೆ, ಸಮುದ್ರ ಬದಿಯಲ್ಲಿ ಹೋಂಗಾರ್ಡ್ ಗ ಳನ್ನು ನಿಯೋಜಿಸಲು ಮನವಿ ಮಾಡಲಾಗುವುದು . ಅಲ್ಲದೆ ಆಯಾಯ ವಾರ್ಡುಗಳಲ್ಲಿ ದಾರಿದೀಪದ ವ್ಯವಸ್ಥೆ ಕಲ್ಪಿಸುವಂತೆ ಕೌನ್ಸಿಲರುಗಳಿಗೆ ಸೂಚಿಸಲಾಗುವುದು ಎಂದರು.
ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರದ ಧರ್ಮಗುರು ಡಾ.ಜೆ.ಬಿ. ಸಲ್ದಾನ್ಹ ಮಾತನಾಡಿ ಶತಮಾನೋತ್ಸವಕ್ಕೆ ಸರ್ವಧರ್ಮೀಯರ ಜತೆಗೆ ಉಳ್ಳಾಲ ನಗರಸಭೆ ಉತ್ತಮವಾಗಿ ಸ್ಪಂಧಿಸಿದೆ. ಈ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಭಾಗವಹಿಸಬೇಕೆಂದು ಆಮಂತ್ರಿಸಿದರು.
ಸಭೆಯಲ್ಲಿ ಪೊಲೀಸ್ ಸಹಾಯಕ ಆಯುಕ್ತ ಕೆ.ರಾಮರಾವ್, ನಗರಸಭೆ ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್ ಉಪಸ್ಥಿತರಿದ್ದರು.


