UN NETWORKS
ಕೊಣಾಜೆ: ಉತ್ತಮ ಶಿಕ್ಷಣ, ವ್ಯಕ್ತಿತ್ವದೊಂದಿಗೆ ಮಾದರಿ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳು ಕೂಡಾ ಮಹತ್ವವಾದ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಕೊಣಾಜೆಯ ವಿಶ್ವಮಂಗಳ ವಿದ್ಯಾಸಂಸ್ಥೆಯು ಕಳೆದ 35 ವರ್ಷದಿಂದ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರೊಂದಿಗೆ ಮುನ್ನಡೆಯುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಅಭಿಪ್ರಾಯಪಟ್ಟರು.
ಅವರು ಕೊಣಾಜೆ ವಿಶ್ವವಿದ್ಯಾಲಯ ಆವರಣದಲ್ಲಿರುವ ವಿಶ್ವಮಂಗಳ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಪಠ್ಯ ಚಟುವಟಿಕೆಗಳ ಜೊತೆಗೆ ದೇಶಕ್ಕಾಗಿ ಅಧ್ಬುತವಾದ ಕೊಡುಗೆ ನೀಡಿದಂತಹ ಅಬ್ದುಲ್ ಕಲಾಂ, ಸಿ.ವಿ.ರಾಮನ್, ಸಿಎನ್ಎನ್ ರಾವ್ ಮೊದಲಾದವರು ಹಿರಿಯ ಬದುಕನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸುವ ಕಾರ್ಯಕ್ರಮಗಳನ್ನು ಸರಣಿಯಾಗಿ ಹಮ್ಮಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಪ್ರೇರಣೆಯಾಗಿ ಅವರ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು ಎಂದರು.
ವಿಶ್ವಮಂಗಳ ವಿದ್ಯಾಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವಂತೆಯೆ ಪಠ್ಯೇತರವಾಗಿ ಕ್ರೀಡೆ ಹಾಗೂ ಇತರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವುದು ಶ್ಲಾಘನೀಯವಾಗಿದೆ. ಈ ವಿದ್ಯಾ ಸಂಸ್ಥೆಯು ಇನ್ನಷ್ಟು ಬೆಳವಣಿಗೆಯೊಂದಿಗೆ ಮುನ್ನಡೆಯಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ಕಾರ್ಪೋರೇಶನ್ ಬ್ಯಾಂಕ್ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಎ.ಕೆ.ವಿನೋದ್ ಅವರು, ವಿದ್ಯಾಸಂಸ್ಥೆಗಳು ಆಯಾ ಪ್ರದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ವಿದ್ಯಾಸಂಸ್ಥೆಯೊಂದಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿ ಪೋಷಕರು ಉತ್ತಮವಾದ ಸಂಬಂಧಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.

ವಿಶ್ವಮಂಗಳ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪ್ರೊ. ಇಸ್ಮಾಯಿಲ್ ಬಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಮಾಡಿದ ಸಾಧನೆಯ ಬಗ್ಗೆ ಬೆಳಕು ಚೆಲ್ಲಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕ್ರೀಡಾ ಕೇತ್ರದಲ್ಲಿ ಸಾಧನೆ ಮಾಡಿದ ಸೃಜನ್ ಹಾಗೂ ಡ್ರಾಮಾ ಜ್ಯೂನಿಯರ್ ವಿಜೇತೆ ವಂಶಿ ರತ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು.
‘ವಿಶ್ವಮಂಗಳ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ.ಬೋಜಪೂಜಾರಿ, ಕೋಶಾಧಿಕಾರಿ ಡಾ.ಪರಮೇಶ್ವರ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಪ್ರೊ.ಶಿವಣ್ಣ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಅಂತು ಡಿಸೋಜ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾವತಿ ಬಿ, ಪ್ರೀಯ ಎನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.


