UN NETWORKS
ಕೊಣಾಜೆ: ನಮ್ಮ ದೇಶದಲ್ಲಿರುವ ವಿವಿಧ ಜಾತಿ, ಧರ್ಮ, ಸಂಸ್ಕೃತಿಗಳಲ್ಲಿ ವೈವಿಧ್ಯತೆಗಳಿರುವುದನ್ನು ನಾವು ಗಮನಿಸಬಹುದು ಆದರೆ ಅದರಲ್ಲಿ ಏಕತೆಯನ್ನು ಕಾಣಲು ಸಫಲರಾಗಿಲ್ಲ. ದೇಶದಲ್ಲಿ ಭಕ್ತಿ ಪರಂಪರೆಯಲ್ಲಿ ಮಾತ್ರ ಏಕತೆಯನ್ನು ಕಾಣಲು ಸಾಧ್ಯವಾಗಿದೆ ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಡಾ.ಎಚ್.ಎಸ್.ಶಿವಪ್ರಕಾಶ್ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಕನದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ವಿವಿಯ ಒಳಾಂಗಣ ಸಭಾಂಗಣದಲ್ಲಿ ಬುಧವಾರ ಕನಕ ಜಯಂತಿ ಪ್ರಯುಕ್ತ ಕನಕ ತತ್ವಚಿಂತನ ಮತ್ತು ಕನಕಗಂಗೋತ್ರಿ ಕಾರ್ಯಕ್ರಮದ ಭಕ್ತಿ ಪರಂಪರೆಯ ಲೋಕಯಾನ ಮತ್ತು ಕನಕದಾಸರು, ಸಮಕಾಲಿನ ಸಂವಾದ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಈ ವರೆಗೆ ಭಕ್ತಿ ಪರಂಪರೆಯ ಅಧ್ಯಯನಗಳು ಕೇವಲ ಸಾಹಿತ್ಯದ ಕಡೆಗೆ ಹೆಚ್ಚು ಗಮನ ಹರಿಸಿವೆ. ಅದರ ಕಾವ್ಯ, ಸಂಗೀತದ ಕಡೆಗೆ ಹೆಚ್ಚಿನ ಗಮನಹರಿಸಲಾಗಿಲ್ಲ. ಈ ಬಗ್ಗೆಯೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ಭಕ್ತಿ ಪರಂಪರೆಯಲ್ಲಿ ಪುರುಷ ಕೇಂದ್ರಿತ ಮೌಲ್ಯಗಳ ಬದಲು ಸ್ತ್ರೀವಾದ ತತ್ವಗಳುಲ್ಲ ಮೌಲ್ಯಗಳು ಬಿಂಬಿತವಾಗುತ್ತದೆ. ಇದೊಂದು ಸಾಂಸ್ಕೃತಿಕ ಅನನ್ಯತೆಯೂ ಹೌದು ಎಂದು ಹೇಳಿದರು.
ಅಲ್ಲಮ ಪ್ರಭು ಅವರು ವಚನದ ಮೂಲಕ ತೋರಿಕೆಯ ಭಕ್ತಿಯನ್ನು ಅಂದೇ ಖಂಡಿಸಿದ್ದರು. ಆದರೆ ಕೆಲವೊಂದು ಭಕ್ತಿ ಪಂಥಗಳು ಅಸಹ್ಯವಾಗಿ ಹುಟ್ಟಿಕೊಳ್ಳುತ್ತಿವೆ. ಇತೀಚೆಗೆ ಸಿನಿಮಾ ತಾರೆಯರಿಗೂ ದೇಶದ ಕೆಲವೆಡೆ ದೇವಾಲಯಗಳು ಹುಟ್ಟಿಕೊಳ್ಳುತ್ತಿರುವುದು ಉತ್ತಮವಾದ ಬೆಳವಣಿಗೆಯಲ್ಲ. ಭಕ್ತಿ ಎನ್ನುವುದು ಸ್ವತಂತ್ರವಾದ ಅಲೆಯಾಗಿದೆ. ಯಾವತ್ತೂ ಭಕ್ತಿಯು ತೋರಿಕೆಯ ಭಕ್ತಿಯಾಗದೆ ಅದು ಸ್ವತಂತ್ರವಾಗಿ ಹುಟ್ಟಿ ಬರಬೇಕು ಎಂದು ಹೇಳಿದರು.
ಭಾರತೀಯ ಸಂಸ್ಕøತಿಯ ಭಾಗವಾಗಿರುವ ಭಕ್ತಿ ಪರಂಪರೆಯ ಬಗ್ಗೆ ಇಂದಿನ ಕಾಲಘಟ್ಟದಲ್ಲಿ ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡು ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಅಧ್ಯಯನಗಳು ನಡೆಯಬೇಕಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ಕನಕದಾಸರು ಸೇರಿಂದಂತೆ ದೇಶದ ಸಂತ ಕವಿಗಳ ಕಾವ್ಯ, ಸಾಹಿತ್ಯದ ಬಗ್ಗೆ ಇಂದಿನ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ನಮ್ಮ ನಾಡಿನ ಸಾಂಸ್ಕøತಿಕ ಐಕ್ಯತೆ ಹಾಗೂ ಅನನ್ಯತೆಯ ಬಗ್ಗೆ ಹೆಚ್ಚೆಚ್ಚು ಅಧ್ಯಯನಗಳ ಮೂಲಕ ಮುನ್ನಡೆಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಕೇಂದ್ರದ ಸಂಯೋಜಕರಾದ ಪ್ರೊ.ಬಿ.ಶಿವರಾಮ ಶೆಟ್ಟಿ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಸಂಶೋಧನಾ ವಿದ್ಯಾರ್ಥಿ ಶಿವರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿನಿ ಶ್ರೀದೇವಿ ಕಲ್ಲಡ್ಕ ಅವರು ಕನಕದಾಸರ ಕೀರ್ತನೆಗಳನ್ನು ಹಾಡಿದರು.
ಸಭಾ ಕಾರ್ಯಕ್ರಮದ ಬಳಿಕ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನಕ ಗಂಗೋತ್ರಿ ಕೀರ್ತನ ಗಾಯನ ಕಾರ್ಯಕ್ರಮ ನಡೆಯಿತು.


