UN NETWORKS
ಕೊಣಾಜೆ: ಸಸ್ಯಗಳ ಉಳಿವಿಗಾಗಿ ಮತ್ತು ಮಾನವಾಭಿವೃದ್ಧಿಗಾಗಿ ಬಳಸಿಕೊಳ್ಳಬಹುದಾದ ಸಸ್ಯ ಸಂಪನ್ಮೂಲಗಳ ಬಗ್ಗೆ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇಂದಿನದ್ದಾಗಿದ್ದು, ಸಸ್ಯಗಳಿದ್ದರೆ ಮಾತ್ರ ಜೀವರಾಶಿಗಳು ಉಳಿಯಬಹುದು. ಇಲ್ಲದಿದ್ದರೆ ಆಮ್ಲಜನಕದ ಕೊರೆತಯಿಂದಾಗಿ ಭೂಮಿಯ ಜೀವರಾಶಿಗಳೆಲ್ಲವೂ ನಶಿಸಿ ಹೋಗಬಹುದು ಎಂದು ಕ್ಯಾಲಿಕಟ್‍ನ ಭಾರತೀಯ ಸಂಬಾರ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ನಿರ್ಮಲ್ ಬಾಬು ಅವರು ಅಭಿಪ್ರಾಯ ಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಿಯಿಕ ಸಸ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕರ್ನಾಟಕ ತಂತ್ರಜ್ಞಾನ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಂಗಳೂರು ವಿವಿ ಹಳೆಸೆನೆಟ್ ಸಭಾಂಗಣದಲ್ಲಿ ಗುರುವಾರ ಸಸ್ಯ ವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳು ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ಸಮಾಜವು ಹಲವಾರು ರೀತಿಯ ಪರಿವರ್ತನೆಗಳಿಗೆ ಕಾರಣವಾಗಿದೆ. ಅದರಲ್ಲೂ ಸಸ್ಯಶಾಸ್ತ್ರ ವಿಜ್ಞಾನ ಕ್ಷೇತ್ರವು ಇಂದಿನ ಆಧುನಿಕತೆಯಲ್ಲಿ ಬಹಳಷ್ಟು ಪರಿಣಾಮವನ್ನು ಬೀರುತ್ತಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ, ವಿದ್ಯಾರ್ಥಿಗಳು ತಮ್ಮ ವಿಶೇಷ ಪರಿಶ್ರಮದೊಂದಿಗೆ ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪುರಾತನ ಕಾಲದಿಂದಲೂ ಮಾನವನ ಬದುಕು ಮತ್ತು ಸಸ್ಯ ಸಂಪತ್ತಿಗೆ ಬಹಳಷ್ಟು ನಂಟಿದೆ. ನಮ್ಮ ಬದುಕಿನಲ್ಲಿ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಸಸ್ಯಶಾಸ್ತ್ರ ವಿಜ್ಞಾನದ ಪ್ರಭಾವ ಪರಿಣಾಮಕಾರಿಯಾದುದು. ಮಂಗಳೂರು ವಿವಿಯಲ್ಲಿ ನಡೆಯುವ ಮೂರು ದಿನಗಳ ವಿಜ್ಞಾನ ವಿಶೇಷ ಉಪನ್ಯಾಸ ಕಾರ್ಯಕ್ರಮವು ಯಶಸ್ವಿಯಾಗಿ ನಡೆದು ಸಮಾಜಕ್ಕೆ ಇನ್ನಷ್ಟು ಬೆಳಕು ಚೆಲ್ಲುವಂತಾಗಲಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪರಿಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು, ಜೀವಶಾಸ್ತ್ರದ ಸಂಶೋಧನೆಯಲ್ಲಿ ವಿದ್ಯುನ್ಮಾನ ವಿಜ್ಞಾನದ ಪಾತ್ರವೂ ಪರಿಣಾಮಕಾರಿಯಾಗಿದೆ. ಭಾರತ ದೇಶವು ಅಘಾದವಾದ ಸಸ್ಯಸಂಪತ್ತು ಮತ್ತು ಅರಣ್ಯವಲಯವನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಸಸ್ಯಶಾಸ್ತ್ರ ವಿಜ್ಞಾನ ದೇಶದ ಅಭಿವೃದ್ಧಿಯಲ್ಲಿ ಬಹಳಷ್ಟು ಪರಿಣಾಮವನ್ನು ಬೀರಬಲ್ಲುದು ಎಂದು ಹೇಳಿದರು.
ಅನ್ವಯಿಕ ಸಸ್ಯಶಾಸ್ತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಕೆ.ಆರ್ ಚಂದ್ರಶೇಖರ್ ಅವರು ವಿಶೇಷ ಉಪನ್ಯಾಸ ಮಾಲಿಕೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.
ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ರಾಜುಕೃಷ್ಣ ಸಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



