UN NETWORKS
ಉಳ್ಳಾಲ: ಸಮಾಜದಲ್ಲಿ ಪೈಶಾಚಿಕತೆ ತಾಂಡವವಾಡುತ್ತಿದ್ದು, ದೇವರನ್ನು ವಿಭಜಿಸುವ ಮೂಲಕ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿಭಜನೆ ಸಿದ್ಧಾಂತಗಳನ್ನು ಸೋಲಿಸುವ ಕಾರ್ಯ ಆಗಬೇಕಿದೆ ಎಂದು ಮಂಗಳೂರು ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞ ಹೇಳಿದ್ದಾರೆ.
ಅವರು ಬೀರಿ ಸಂತ ಅಲೋಷಿಯಸ್ ಕಾಲೇಜು (ಎಐಎಂಐಟಿ) ಹಾಗೂ ಕೋಟೆಕಾರು ಧಾರ್ಮಿಕ ಸೌಹಾರ್ದ ವೇದಿಕೆ ವತಿಯಿಂದ ಬುಧವಾರ ಬೀರಿ ಸಂತ ಅಲೋಷಿಯಸ್ ಕಾಲೇಜು ವಠಾರದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪೈಶಾಚಿಕತೆಯ ಕೃತ್ಯಗಳಿಂದ ಮನುಷ್ಯನನ್ನು ರಕ್ತಪಾತ ಮಾಡುವುದರ ಜತೆಗೆ ಪರಿಸರವನ್ನು ನಾಶ ಮಾಡುವ ಕೆಲಸ ಸಮಾಜದಲ್ಲಿ ಆಗುತ್ತಿದೆ. ಕುರ್ಆನ್ನಲ್ಲಿ ಪಿಶಾಚಿ ಅಂದರೆ ಶತ್ರು ಅನ್ನುವ ಉಲ್ಲೇಖ ಇದೆ. ಧಾರ್ಮಿಕ ಚಿಂತನೆಗಳಿಂದ ಪೈಶಾಚಿಕತೆಯನ್ನು ಹೋಗಲಾಡಿಸಲು ಸಾಧ್ಯ. ಇದು ವಿಭಜನೆಯ ಕಾಲವಾಗಿದ್ದು, ದೇವರನ್ನು ವಿಭಜಿಸುವ ಮೂಲಕ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ವಿಭಜನೆ ಅನ್ನುವುದೇ ಅನೈಸರ್ಗಿಕ, ವಿಭಜನೆ ಸಿದ್ಧಾಂತಗಳನ್ನೇ ಸೋಲಿಸುವ ಕಾರ್ಯ ಆಗಬೇಕಿದೆ . ಶಿಕ್ಷಿತರೇ ದೇಶದ್ರೋಹ ಕೆಲಸಗಳೊಂದಿಗೆ ಹಗರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಮೌಲ್ಯಗಳಿಲ್ಲದ ವ್ಯವಸ್ಥೆ ಹಾಗೂ ನೈತಿಕತೆಯಿಲ್ಲದ ಶಿಕ್ಷಣದಿಂದ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಯುವಸಮುದಾಯ ಜತೆಯಾಗಿ ಆತಂಕವಿಲ್ಲದ ಭರವಸೆಯ ಸಮಾಜವನ್ನು ಕಟ್ಟಲು ಪಣತೊಡಬೇಕಿದೆ ಎಂದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ಹಬ್ಬಗಳು ಆಚಾರ ವಿಚಾರಗಳಿಗೆ ಮಾತ್ರ ಸೀಮಿತವಾದುದಲ್ಲ. ಎಲ್ಲರೂ ಆಚರಿಸುವ ಹಬ್ಬ ದೀಪಾವಳಿಯಾಗಿದೆ. ಇನ್ನೊಂದು ಧರ್ಮದಲ್ಲಿರುವ ವ್ಯತ್ಯಾಸಗಳು ಹಾಗೂ ಸಂಪ್ರದಾಯಗಳನ್ನು ಉಳಿಸಲು ಇಂತಹ ಕಾರ್ಯಕ್ರಮ ಸಹಕಾರಿ ಎಂದರು.
ಸಂತ ಜೋಸೆಫರ ಸೆಮಿನರಿಯ ವಿಶ್ರಾಂತ ರೆಕ್ಟರ್ ಫಾ.ಪ್ರದೀಪ್ ಸಿಕ್ವೇರಾ ಮಾತನಾಡಿ ಎಲ್ಲಾ ಧರ್ಮೀಯರಿಗೆ ಗೌರವಿಸಿ, ಅವರ ಆಚಾರ ವಿಚಾರಗಳನ್ನು ಅರಿಯುವುದೇ ಕ್ರೈಸ್ತ ಧರ್ಮವಾಗಿದೆ. ಎಲ್ಲರೂ ಪರಸ್ಪರ ಆಧ್ಯಾತ್ಮಿಕ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಶಾಂತಿಯುತ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಈ ವೇಳೆ ಅಲೋಷಿಯಸ್ ಕಾಲೇಜಿನ ನಿರ್ದೇಶಕ ಡೆನ್ಝಿಲ್ ಲೋಬೊ, ಧರ್ಮ ಸಔಹಾರ್ದ ವೇದಿಕೆ ಅಧ್ಯಕ್ಷ ಕೆ.ಸುಕುಮಾರ್ ರಾವ್ ಉಪಸ್ಥಿತರಿದ್ದರು.























