UN NETWORKS
ಉಳ್ಳಾಲ : ಕೆ.ಸಿ.ನಗರ ಯುನೈಟೆಡ್ ಸೋಷಿಯಲ್ ವೆಲ್ಫೇರ್ ಆರ್ಗನೈಸೇಶನ್ ವತಿಯಿಂದ ಮಾದಕ ವ್ಯಸನಿಗಳ ವಿರುದ್ಧ ಜನಜಾಗೃತಿ ಸಭೆ ಶನಿವಾರ ಕೆ.ಸಿ.ರೋಡು ಕೈರಲಿ ಸಭಾಂಗಣದಲ್ಲಿ ಹಾಗೂ ಮನೆಮನೆಗೆ ಕಾಲ್ನಡಿ ಜಾಥಾ ಭಾನುವಾರ ಸೋಮೇಶ್ವರ, ಕಿನ್ಯ, ಕೋಟೆಕಾರ್ ಹಾಗೂ ತಲಪಾಡಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಉಚ್ಚಿಲ್ ಮಾತನಾಡಿ, ಮಾದಕ ದ್ರವ್ಯ ಎಂಬುದು ಅನಾದಿ ಕಾಲದಿಂದಲೂ ಮನುಷ್ಯನಿಗೆ ಶಾಪವಾಗಿ ಕಾಡುತ್ತಿದೆ, ಆದರೂ ಈ ಬಗ್ಗೆ ನಾವು ಎಚ್ಚೆತ್ತುಕೊಂಡಿಲ್ಲ. ಯುವಸಮುದಾಯ ಮಾದಕ ವ್ಯಸನಕ್ಕೆ ಹೆಚ್ಚು ಆಕರ್ಷಿತವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು.
ಯುನೈಟೆಡ್ ಸೋಷಿಯಲ್ ವೆಲ್ಫೇರ್ ಆರ್ಗನೈಸೇಶನ್ ಸಂಚಾಲಕ ಸಂಶುದ್ದೀನ್ ಉಚ್ಚಿಲ್ ಮಾತನಾಡಿ, ಸ್ನೇಹಿತರ ಒತ್ತಾಯಕ್ಕೆ ಕುತೂಹಲ ತಣಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಯುವಕರು ಕ್ರಮೇಣ ಅದನ್ನು ಬಿಡಲು ಸಾಧ್ಯವಾಗದೆ ಶಾಶ್ವತ ದಾಸರಾಗಿ ಬಿಡುತ್ತಾರೆ. ಈ ವ್ಯಸನದಿಂದ ಮಾನವೀಯತೆ ಎಂಬುದನ್ನೇ ಮರೆತುಬಿಟ್ಟು, ಮನೋ ಸಾಮಥ್ರ್ಯವನ್ನೂ ಕಳೆದುಕೊಳ್ಳುತ್ತಾರೆ ಎಂದರು.
ಪ್ರತೀ ಮದರಸ, ಮಸೀದಿಗಳಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಬಗ್ಗೆ ಸಭೆಯಲ್ಲಿದ್ದ ಪ್ರಮುಖರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಮದರಸ ಅಧ್ಯಕ್ಷ ಸಲಾಂ ಉಚ್ಚಿಲ್, ಯುನೈಟೆಡ್ ಸೋಷಿಯಲ್ ವೆಲ್ಫೇರ್ ಆರ್ಗನೈಸೇಶನ್ ಅಧ್ಯಕ್ಷ ರಹೀಂ ಉಚ್ಚಿಲ್, ಕಾರ್ಯದರ್ಶಿ ಶಾಫಿ, ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಕಿನ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿರಾಜ್, ಪ್ರಮುಖರಾದ ಲತೀಫ್, ಸಲಾಂ ಕೆ.ಸಿ.ನಗರ, ರಶೀದ್, ಇಮ್ರಾನ್, ಹಕೀಂ, ಇರ್ಷಾದ್ ಇನ್ನಿತರರು ಉಪಸ್ಥಿತರಿದ್ದರು.



