UN NETWORKS
ಉಳ್ಳಾಲ: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಆಯೋಜಿಸುವ ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ ( ಗೂಡುದೀಪ ಸ್ಪರ್ಧೆ ) ಪ್ರತಿಷ್ಠಾನದ ದಶಮ ಸಂಭ್ರಮದ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅ.21 ಮತ್ತು ಅ.22 ರಂದು ತೊಕ್ಕೊಟ್ಟು ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿದೆ ಎಂದು ಭಗತ್ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಹೇಳಿದ್ದಾರೆ.
ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಗುರುವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
ಅ. 21 ಶನಿವಾರ ಸಂಜೆ ಸಭಾ ಕಾರ್ಯಕ್ರಮ ಬಳಿಕ 6.30ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಟಾಪ್ ಸಿಂಪೋನಿ ತಂಡದಿಂದ `ನೃತ್ಯ ವೈಭವ’ ಕಾರ್ಯಕ್ರಮ, ಉದ್ಘಾಟನಾ ಸಮಾರಂಭವನ್ನು ಶೃಂಗೇರಿ ಶಾಖಾ ಮಠದ ಧರ್ಮದರ್ಶಿ ಸತ್ಯಶಂಕರ ಬೊಳ್ಳಾವ ನೆರವೇರಿಸಲಿದ್ದಾರೆ. ಶ್ರೀ ಭಗವತಿ ಕ್ಷೇತ್ರ ಉಳ್ಳಾಲ ಇದರ ಆಡಳಿತ ಮೊಕ್ತೇಸರ ಗಂಗಾಧರ್ ಉಳ್ಳಾಲ್ ಹಾಗೂ ಗೌರವ ಉಪಸ್ಥಿತಿಯಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಲಿದ್ದು, 9 ಗಂಟೆಗೆ ಖುಷಿ ಮೆಲೋಡೀಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಭಗತ್ ಸಿಂಗ್ ಸಾಧಕ ಪ್ರಶಸ್ತಿಯನ್ನು ತೊಕ್ಕೊಟ್ಟು ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಕಾರ್ಯಾಧ್ಯಕ್ಷ ಸತೀಶ್ ಕರ್ಕೇರ ಇವರಿಗೆ ಪ್ರಧಾನ ಮಾಡಲಿದ್ದು, ತೊಕ್ಕೊಟ್ಟು ಪರಿಸರದಲ್ಲಿ 50 ವರ್ಷಕ್ಕೂ ಮಿಕ್ಕಿ ಸಾಮಾಜಿಕ, ಧಾರ್ಮಿಕ, ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಹಲವರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.
ಅ. 22ರಂದು ರವಿವಾರ ಸಂಜೆ 5 ಗಂಟೆಗೆ ಗೂಡುದೀಪ ನೋಂದಾವಣೆ ನಡೆಯಲಿದ್ದು, ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಪಿಕಾಡ್ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್ ನೆರವೇರಿಸಲಿದ್ದು, ಮುಡಿಪು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾಜಾರಾಮ್ ಭಟ್ ವಹಿಸಲಿದ್ದು, 9 ಗಂಟೆಗೆ `ಸತ್ಯ ಏರೆಗ್ಲಾ ಗೊತ್ತುಜ್ಜಿ’ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಗೂಡುದೀಪ ಸ್ಪರ್ಧೆ : ಗೂಡುದೀಪ ಸ್ಪರ್ಧೆಯು ಆಧುನಿಕ ಹಾಗೂ ಸಾಂಪ್ರದಾಯಿಕ ವಿಭಾಗಗಳಲ್ಲಿ ನಡೆಯಲಿದ್ದು, ಎರಡು ವಿಭಾಗಕ್ಕೂ ಪ್ರಥಮ -6000 ನಗದು, ದ್ವಿತೀಯ -4000, ತೃತೀಯ – 3000, ಚತುರ್ಥ – 2000 ಬಹುಮಾನ ಹಾಗೂ ಸ್ಮರಣಿಕೆ ಮತ್ತು ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ತುಳಸಿಕಟ್ಟೆ ಫೋಟೊ ಸ್ಪರ್ಧೆ : ಅಂದದ ತುಳಸಿಕಟ್ಟೆ ಸ್ಪರ್ಧೆ ನಡೆಯಲಿದ್ದು, ತಮ್ಮ ಮನೆಯ ತುಳಸಿಕಟ್ಟೆಯ ಫೋಟೊವನ್ನು ವಾಟ್ಸ್ಯಾಪ್ ನಂ. 9341356516 ಮೊಬೈಲ್ ನಂಬರಿಗೆ ನ. 4ರೊಳಗೆ ಕಳುಹಿಸಿಕೊಡಬೇಕಾಗಿದೆ.
ಸಾಮಾಜಿಕ ಚಟುವಟಿಕೆಗಳು : ಬಡಜನರ ಸೇವೆಗಾಗಿ ಮೃತ್ಯುಂಜಯ ಆಂಬ್ಯುಲೆನ್ಸ್ ಸೇವಾ ಯೋಜನೆ 10 ವರ್ಷಗಳಿಂದ ನಡೆಯುತ್ತಾ ಬಂದಿದೆ. 16 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಳೆದ 7 ವರ್ಷಗಳಲ್ಲಿ ಸುಮಾರು 1500ಕ್ಕೂ ಹೆಚ್ಚು ಅಂತ್ಯಸಂಸ್ಕಾರದ ಕೆಲಸದಲ್ಲಿ ಆಂಬ್ಯುಲೆನ್ಸ್ ಸಹಕಾರಿಯಾಗಿದೆ. ಪ್ರತಿಷ್ಠಾನ ರಾಷ್ಟ್ರ ಚಿಂತನೆಯ ಚಟುವಟಿಕೆಗಳ ಭಾಗವಾಗಿ ನವಮಂಗಳೂರು ನಿರ್ಮಾಣದ ಶಿಲ್ಪಿ ಶ್ರೀನಿವಾಸ ಮಲ್ಯರ ದಿನಾಚರಣೆ, ಹುತಾತ್ಮ ದಿನಾಚರಣೆ, ಗುರುವಂದನಾ ಕಾರ್ಯಕ್ರಮ, ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರಮದಾನ, ರಕ್ತದಾನ ಹಾಗೂ ಅಸಹಾಯಕರಿಗೆ ನೆರವು, ಮಾನಸಿಕ ಅಸ್ವಸ್ಥೆ ಮಹಿಳೆಗೆ ನೆರವು ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಸುದ್ಧಿಗೋಷ್ಠಿಯಲ್ಲಿ ಗೌರವ ಸಲಹೆಗಾರ ಆನಂದ .ಕೆ.ಅಸೈಗೋಳಿ, ಮಾಧ್ಯಮ ಪ್ರಚಾರದ ಪ್ರವೀಣ್.ಎಸ್.ಕುಂಪಲ , ಪ್ರ.ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ರಾಕೇಶ್ ಬೈಪಾಸ್, ಪ್ರ.ಸಂಘಟನ ಕಾರ್ಯದರ್ಶಿ ಪುರುಷೋತ್ತಮ ಕಲ್ಲಾಪು ಭಾಗವಹಿಸಿದ್ದರು.





