UN NETWORKS
ಉಳ್ಳಾಲ: ಜಿಲ್ಲೆಯಾದ್ಯಂತ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ಮತ್ತು ಗೌರವವಿದ್ದು, ಸಹಕಾರಿ ಚಳವಳಿ ಮೂಲಕ ಆರಂಭವಾದ ಕ್ಷೇತ್ರ ಹಿರಿಯರ ಮಾರ್ಗದರ್ಶನದ ಮೂಲಕ ಬೆಳೆದು ನಿಂತು ಸದ್ಯ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿಯನ್ನು ನೀಡುತ್ತಿದೆ ಎಂದು ಜಿಲ್ಲೆ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ರಮಾನಾಥ ರೈ ಅವರು ಹೇಳಿದರು.
ಅವರು ಕೋಟೆಕಾರ್ ಬೀರಿಯಲ್ಲಿ ಭಾನುವಾರ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘದ ಪ್ರದಾನ ಕಚೇರಿಯ ನವೀಕೃತ ಕಟ್ಟಡ ಹಾಗೂ ರೈತಸದನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯವನ್ನು ಹೋಲಿಸಿದಾಗ ಜಿಲ್ಲೆಯ ಜನರು ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಮಾಡುವವರಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ 298 ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಲಾಗಿದೆ. ಸರಕಾರ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ರೂ.3 ಲಕ್ಷ ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತಿದೆ. ರೂ.10 ಲಕ್ಷ ಸಾಲಕ್ಕೆ ಶೇ. 3 ಬಡ್ಡಿಯಲ್ಲಿ ಸಾಲದ ವ್ಯವಸ್ಥೆಯಿದೆ. ಹೈನುಗಾರಿಕೆ ನಡೆಸುವವರಿಗೆ ಶೇ.2-3 ರವರೆಗೆ ಇದ್ದಂತಹ ಗೌರವಧನವನ್ನು ಶೇ.5 ಕ್ಕೆ ಏರಿಕೆ ಮಾಡಲಾಗಿದೆ. ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಹಕಾರಿ ಸಿದ್ಧಾಂತ ಕಾರ್ಯನಿರ್ವಹಿಸಬೇಕಿದೆ. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸುತ್ತಮುತ್ತಲಿನ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಿಸುತ್ತಾ ಬಂದಿರುವುದರಿಂದ ಅಭಿವೃದ್ಧಿಯ ಪಥವನ್ನು ಸಾಧಿಸಿದೆ. ಬ್ಯಾಂಕ್ ಗಳು ಕೇವಲ ಬಂಡವಾಳಶಾಹಿಗಳಿಗಾಗಿ ಮಾತ್ರ ಕಾರ್ಯಚರಿಸುತ್ತಿದ್ದು, ಇದರಲ್ಲಿ ವೃತ್ತಿ ನಿರ್ವಹಿಸುತ್ತಿರುವವರಲ್ಲಿ ಅಧಿಕಾರಿಶಾಹಿ ಮನೋಭಾವವಿದೆ. ಇದರಿಂದ ಗ್ರಾಮೀಣ ಭಾಗದ ಜನ ಸಹಕಾರಿ ಸಂಘಗಳನ್ನೇ ಆಶ್ರಯಿಸುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಬ್ಯಾಕಿಂಗ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು ಮಾತನಾಡಿ, ಜನಸಾಮಾನ್ಯರ ಕೊಂಡಿಯಾಗಿದ್ದುಕೊಂಡು ಅವರಿಗೆ ಸಿಗಬೇಕಾದ ವಿವಿಧ ಯೋಜನೆಗಳನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65000ಜನರಿಗೆ ಸಾಲ ಮನ್ನಾ ಕಾರ್ಯಕ್ರಮ ಅನುಷ್ಠಾನ ಮಾಡಿ ಯಶಸ್ವಿಯಾಗಿದೆ. ಸಹಕಾರಿ ಸಂಘಗಳು ಹತ್ತು ಜನರು ಸೇರಿಕೊಂಡು ನಿರ್ಮಾಣ ಮಾಡುವ ಸಂಸ್ಥೆಯಾಗಿರುವುದರಿಂದ ಊರಿನ ಜನರು ಹೆಚ್ಚು ವಿಶ್ವಾಸಯುತವಾಗಿ ವ್ಯವಹರಿಸಲು ಸಹಕಾರಿಯಾಗುತ್ತದೆ. ಕೋಟೆಕಾರ್ ವ್ಯವಸಾಯ ಸೇವಾ ಸಂಘದ ಕಳೆದ 60 ವರ್ಷದಿಂದ ಜನರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಮುನ್ನಡೆಯುತ್ತಿದೆ ಎಂದರು.
ಭದ್ರತಾ ಕೊಠಡಿ ಉದ್ಘಾಟಿಸಿದ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, ಸಹಕಾರಿ ಸಂಘಗಳು ಎಲ್ಲರೂ ಒಳಗೊಳ್ಳುವಿಕೆಯ ಮೂಲಕ ಜನರೊಂದಿಗೆ ವಿಶ್ವಾಸಯುತವಾಗಿ ವ್ಯವಹರಿಸಿ ಮುನ್ನಡೆಯುತ್ತಿದೆ. ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘವು ಈ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಉತ್ತಮ ಬ್ಯಾಂಕ್ ಆಗಿ ಮೂಡಿಬರಲಿ ಎಂದು ಹಾರೈಸಿದರು. ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ.ಎ. ಮಹಮ್ಮದ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿಪಿಐಎಂ ಹಿರಿಯ ನಾಯಕ ಕೆ.ಆರ್. ಶ್ರೀಯಾನ್, ಎಐಎಂಐಟಿ ನಿರ್ದೇಶಕ ಫಾ| ಡೆಂಝಿಲ್ ಲೋಬೋ ಎಸ್.ಜೆ., ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ.ಉಚ್ಚಿಲ್. ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿ. ಇದರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಡಾ| ಎಂ.ಎಂ.ಎನ್.ರಾಜೇಂದ್ರ ಕುಮಾರ್, ಕೋಟೆಕಾರು ವ್ಯವಸಾಯ ಸೇವಾ ಸಂಘದ ತಲಪಾಡಿ ಶಾಖೆ ದರೋಡೆ ನಡೆಸಿದ ಸಂದರ್ಭದಲ್ಲಿ ಶೌರ್ಯ ಮೆರೆದ ರಾಮಚಂದ್ರ ಆಚಾರ್ಯ ಮತ್ತು ಅವರಿಗೆ ಸಹಕರಿಸಿದ ಸ್ಥಳೀಯ ನಿವಾಸಿ ಹರೀಶ್ ಶೆಟ್ಟಿ ಪಂಜಿಮುಂಡೇಲು, ರೈತಸದನ ಕಟ್ಟಡದ ಇಂಜಿನಿಯರ್ ದೇವದಾಸ್, ಕಟ್ಟಡ ನಿರ್ಮಾಣ ಮೇಲ್ವಿಚಾರಕ ಕೆ.ಬಿ. ಅಬ್ಬುಸಾಲಿ ಅವರನ್ನು ಸನ್ಮಾನಿಸಲಾಯಿತು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್ ಯು., ನಿರ್ದೇಶಕರಾದ ಗಂಗಾಧರ ಉಳ್ಳಾಲ್, ಉದಯ ಕುಮಾರ್ ಶೆಟ್ಟಿ, ಯು. ಅರುಣ್ ಕುಮಾರ್, ಗಣೇಶ್ ಶೆಟ್ಟಿ ರಕ್ಷಾ ತಲಪಾಡಿ, ನಾರಾಯಣ ತಲಪಾಡಿ, ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಎಂ.ಎ. ಮಹಮ್ಮದ್ ಬಶೀರ್ ಸ್ವಾಗತಿಸಿದರು. ನಿರ್ದೇಶಕ ಕೆ. ಕೃಷ್ಣಪ್ಪ ಸಾಲ್ಯಾನ್ ಪ್ರಸ್ತಾವನೆಗೈದರು. ಪೆÇಸಕುರಲ್ನ ನಿರ್ದೇಶಕ ವಿದ್ಯಾಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ಸಿಬ್ಬಂದಿ ಲೋಕಯ್ಯ ಪನೀರ್ ವಂದಿಸಿದರು.
ಕೋಟ್ಯಂತರ ಚಿನ್ನ ಉಳಿಸಿದ ಸಿಬ್ಬಂದಿಗೆ ಸನ್ಮಾನ:
ಜೂ. 23 ರ ಮಧ್ಯಾಹ್ನ ವೇಳೆ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ.ರೋಡ್ ಶಾಖೆಯಿಂದ ಸಿಬ್ಬಂದಿಯನ್ನು ಶೌಚಾಲಯದೊಳಕ್ಕೆ ಕೂಡಿ ಹಾಕಿದ್ದ ಇಬ್ಬರು ದರೋಡೆಕೋರರ ತಂಡ ರೂ. 5.5 ಕೋಟಿ ಬೆಲೆಬಾಳುವ 20 ಕೆ.ಜಿ ಯಷ್ಟು ಚಿನ್ನ ಕಳವು ನಡೆಸಿದ್ದರು. ಈ ನಡುವೆ ಸಿಬ್ಬಂದಿ ರಾಮಚಂದ್ರ ಆಚಾರ್ಯ ಎಂಬವರು ಬಾಗಿಲು ಮುರಿದು ಬ್ಯಾಂಕಿನ ಒಂದನೇ ಮಹಡಿಯಿಂದ ಹೊರ ಓಡಿ ಬಂದು ಬೈಕಿನಲ್ಲಿ ಚಿನ್ನದೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ದರೋಡೆಕೋರರಿಗೆ ಕಲ್ಲೆಸೆದ ಪರಿಣಾಮ, ಇಬ್ಬರು ಆಗಂತುಕರು ಚಿನ್ನದ ಚೀಲವನ್ನು ಎಸೆದು ಬೈಕಿನಲ್ಲಿ ಪರಾರಿಯಾಗಿದ್ದರು. ಇವರ ಧೈರ್ಯದಿಂದ ಕೋಟ್ಯಂತರ ಬೆಲೆಬಾಳುವ ಬ್ಯಾಂಕಿನ ಚಿನ್ನ ಉಳಿದಂತಾಗಿದೆ. ಇವರ ಸಾಹಸವನ್ನು ಪರಿಗಣಿಸಿ ಬ್ಯಾಂಕ್ ಆಡಳಿತ ಮಂಡಳಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸುವ ಮೂಲಕ ಗೌರವಿಸಿತು.






































































