UN NETWORKS
ಉಳ್ಳಾಲ: ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದಿಂದ ಗಾಂಜಾ ಮಾಫಿಯಾ ವಿರುದ್ಧ ಹೋರಾಡಿದ ಮುಕ್ಕಚ್ಚೇರಿಯ ಜುಬೈರ್ ಹತ್ಯೆಯಾಗಿದ್ದು, ಸಾರ್ವಜನಿಕರೆದುರೇ ಬೀದಯಲ್ಲೇ ಹತ್ಯೆ ನಡೆಸಿರುವುದು ಪೊಲೀಸ್ ಇಲಾಖೆ ವಿಫಲತೆಯನ್ನು ತೋರಿಸುತ್ತದೆ ಎಂದು ಡಿ ವೈ ಎಫ್ ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಅವರು ಡಿ ವೈ ಎಫ್ ಐ ಉಳ್ಳಾಲ ವಲಯ ಸಮಿತಿ ವತಿಯಿಂದ ಭಾನುವಾರ ಜುಬೈರ್ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯಿಸಿ, ಗಾಂಜಾ ಮಾರಾಟ ಜಾಲದ ವಿರುದ್ಧ ಮುಕ್ಕಚ್ಚೇರಿ ಜಂಕ್ಷನ್ನಿನಿಂದ ಉಳ್ಳಾಲ ನಗರದ ಮೈದಾನದವರೆಗೆ ಹಮ್ಮಿಕೊಂಡ ಪ್ರತಿರೋಧ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉಳ್ಳಾಲದಲ್ಲಿ ಯುವಜನತೆಯ ಬಾಳನ್ನೇ ಗಾಂಜಾ ಜಾಲ ಹಾಳು ಮಾಡುತ್ತಿದೆ. ಇದರ ವಿರುದ್ಧ ಹೋರಾಡಿದ ಜುಬೈರ್ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಮ ರಾವ್ ಉದ್ದಟತನದಿಂದ ವರ್ತಿಸುತ್ತಿದ್ದಾರೆ. `ಎಲ್ಲಿದೆ ಗಾಂಜಾ’ ಎಂದು ಪ್ರತಿಭಟನಾಕಾರರಲ್ಲಿ ಪ್ರಶ್ನಿಸುತ್ತಿರುವ ಸಹಾಯಕ ಪೊಲೀಸ್ ಆಯುಕ್ತರು ಇಲಾಖೆಯ ಸುತ್ತಮುತ್ತಲೂ ತಿರುಗಾಡುತ್ತಾ, ಪೊಲೀಸ್ ಅಧಿಕಾರಿಯ ಛೇಂಬರಿನೊಳಗಡೆ ಬಂದು ಕುರ್ಚಿಯನ್ನಿಟ್ಟು ಜತೆಗೆ ಚಹಾ ಕುಡಿಯುವ ಗಾಂಜಾ ಪೂರೈಸುವ ಸೂತ್ರಧಾರಿಗಳನ್ನು ಮೊದಲಿಗೆ ವಿಚಾರಿಸಬೇಕಾಗಿದೆ.
ಜುಬೈರ್ ಕೊಲೆಗೆ ವೈಯಕ್ತಿಕ ಕಾರಣ ಅನ್ನುವ ಹೇಳಿಕೆಯನ್ನು ಆರೋಪಿಗಳ ಬಂಧನದ ಸುದ್ಧಿಗೋಷ್ಠಿಯಲ್ಲಿ ಇಲಾಖೆ ತಿಳಿಸಿದೆ. ಮೊದಲು ವೈಯಕ್ತಿಕ ಕಾರಣ ಯಾವುದು ಎಂಬುದನ್ನು ಇಲಾಖೆ ತಿಳಿಸಬೇಕಿದೆ. ಜನಪ್ರತಿನಿಧಿಗಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸರು ವೈಯಕ್ತಿಕ ಕಾರಣವೆಂದು ಜುಬೈರ್ ಪ್ರಕರಣದ ಹಾದಿಯನ್ನೇ ತಪ್ಪಿಸುತ್ತಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತರು ಈವರೆಗೆ ಯಾವುದೇ ಗಾಂಜಾ ಪ್ರಕರಣ ಉಳ್ಳಾಲ ಠಾಣೆಯಲ್ಲಿಲ್ಲ ಅನ್ನುವ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಮಕ್ಕಳು ಗಾಂಜಾ ವ್ಯಸನಿಗಳಾದವರ ಕುರಿತು ಹೆತ್ತವರು ಪೊಲೀಸ್ ಠಾಣೆಗೆ ದೂರು ನೀಡುತ್ತಾರೆಯೇ? ಮೊದಲಿಗೆ ಪೊಲೀಸರು ಮದ್ಯವ್ಯಸನ ಮುಕ್ತ ಕೇಂದ್ರಗಳಲ್ಲಿ ಸಂದರ್ಶಿಸಿ ಮಾಹಿತಿ ಸಂಗ್ರಹಿಸಬೇಕಾಗಿದೆ. ಅಲ್ಲಿ ಎಷ್ಟು ಪ್ರಮಾಣದಲ್ಲಿ ಯುವಸಮುದಾಯ ಗಾಂಜಾ ವ್ಯಸನಿಗಳಾಗಿದ್ದಾರೆ ಅನ್ನುವುದು ಸ್ಪಷ್ಟವಾಗುತ್ತದೆ .
ಜುಬೈರ್ ಹತ್ಯೆ ಕುರಿತು ಚಿತ್ರಕಥೆಯಂತೆ ಜನಪ್ರತಿನಿಧಿಗಳು ಬರೆದುಕೊಟ್ಟ ಸ್ಕ್ರಿಪ್ಟ್ ಅನ್ನು ಪೊಲೀಸರು ಮಾಧ್ಯಮದ ಮುಂದೆ ವಿವರಿಸಿದ್ದಾರೆ. ಇಂತಹ ಪೊಲೀಸರನ್ನು ಹೊರಕಳುಹಿಸಬೇಕಾಗಿದೆ. ಜನರಲ್ಲಿ ಹೆಪ್ಪುಗಟ್ಟಿದ ಆಕ್ರೋಶದ ಫಲವಾಗಿ ಸಚಿವ ಖಾದರ್ ಅವರನ್ನು ಬಹಿಷ್ಕರಿಸಿದ್ದಾರೆ. ಅದಕ್ಕಾಗಿ ಸರಕಾರದ ಏಜೆನ್ಸಿ ಮುಖೇನವೇ ಮಾದಕ ದ್ರವ್ಯ ಜಾಲದ ಕುರಿತು ಸರ್ವೇ ನಡೆಸಲಿ. ಈ ಮೂಲಕ ಜುಬೈರ್ ಕುಟುಂಬಕ್ಕೆ ನ್ಯಾಯ ಕೊಡಿಸುವ ಜತೆಗೆ ಹಾದಿ ತಪ್ಪುವ ಯುವಸಮುದಾಯದ ರಕ್ಷಣೆಯ ಹೊಣೆ ಸರಕಾರದ ಮೇಲಿದೆ. ಸಂಸದ ನಳಿನ್ ಕಟೀಲ್ ಅವರು ಚುನಾವಣೆ ಉದ್ದೇಶವನ್ನು ಮುಂದಿಟ್ಟುಕೊಂಡು ಜುಬೈರ್ ಮನೆಗೆ ಭೇಟಿ ನೀಡಿದ್ದಾರೆ. ಅದರ ಬದಲು ಗಾಂಜಾ ವ್ಯಸನಿಗಳಿಗೆ ಸಹಕರಿಸುವ ಪೊಲೀಸರನ್ನು ಹೊರಕಳುಹಿಸಿ, ಧಕ್ಷ ಅಧಿಕಾರಿಯನ್ನು ನೇಮಿಸುವ ಕೆಲಸ ಮಾಡುವ ಮೂಲಕ ಜನಪ್ರತಿನಿಧಿಯ ಜವಾಬ್ದಾರಿಯನ್ನು ಮಾಡಿ ಎಂದು ಆಗ್ರಹಿಸಿದರು.
ಓಮ್ನಿ ಕಾರಿನ ಪತ್ತೆಯೇ ಇಲ್ಲ : ಚಿನ್ನ ಕಳವು ನಡೆಸಿದ ಪ್ರಕರಣದಲ್ಲಿ , ಕಳ್ಳನ ಬಂಧನವಾದಲ್ಲಿ ಆತ ಮಾರಾಟ ಮಾಡಿರುವ ಮೂಲವನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಳ್ಳುವ ಕಾರ್ಯ ಇಲಾಖೆ ಮಾಡುತ್ತದೆ. ಆದರೆ ಗಾಂಜಾ ವಿಚಾರದಲ್ಲಿ ಕೇವಲ ಸೇವಿಸಿದವರನ್ನು ಮಾತ್ರವೇ ಬಂಧಿಸಲಾಗುತ್ತಿದೆ. ಅವರಿಗೆ ಪೂರೈಸಲು ಲೋಡುಗಟ್ಟಲೆ ಜಿಲ್ಲೆಗೆ ಗಾಂಜಾ ಪೂರೈಸುವ ಸೂತ್ರಧಾರಿಗಳನ್ನು ಬಂಧಿಸದಿರಲು ಕಾರಣವೇನು ಅನ್ನುವುದು ಸ್ಪಷ್ಟವಾಗುತ್ತಿಲ್ಲ. ಅಲ್ಲದೆ ಜುಬೈರ್ ಹತ್ಯೆ ನಡೆದ ಸ್ಥಳದಲ್ಲಿದ್ದ ಓಮ್ನಿ ಕಾರನ್ನು ವಶಕ್ಕೆ ಪಡೆದುಕೊಳ್ಳುವ ವಿಚಾರವಾಗಿಲ್ಲ. ಕಾರೊಳಗಡೆ ಇದ್ದವರ ಸೂತ್ರಧಾರಿಗಳ ವಿಚಾರವನ್ನೇ ಪೊಲೀಸರು ತೆಗೆಯುತ್ತಿಲ್ಲ. ಹತ್ಯೆ ನಂತರ ಮಸೀದಿ ಒಳಗಡೆಯಿಂದ ಹೊರಗಡೆ ಕಾರು ಹೋಗುತ್ತದೆ ಅವರನ್ನು ವಿಚಾರಿಸುವ ಕೆಲಸ ಪೊಲೀಸರಿಂದ ಆಗಿಲ್ಲ. ಪ್ರಕರಣದಲ್ಲಿ ನಾಲ್ವರ ಬಂಧನವಾಗಿದೆ. ಅವರಿಗೆ ಮತ್ತೆ ಜೈಲಿಗೆ ಆಹಾರ ಕೊಂಡೊಯ್ಯುವವರ ಮತ್ತು ಗಾಂಜಾ ಪೂರೈಸುವವರ ಮಾಹಿತಿ ಸಂಗ್ರಹಿಸಿದಲ್ಲಿ ಕೊಲೆಯ ಸೂತ್ರಧಾರಿಗಳ ಬಂಧನವಾಗಬಹುದು ಎಂದ ಅವರು ಮಂಗಳೂರಿನಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು, ಇದು ಇಡೀ ಪೊಲೀಸ್ ಇಲಾಖೆಗೆ ನಾಚಿಕೆಗೇಡಿನ ಸಂಗತಿ ಎಂದರು.
ಡಿ ವೈ ಎಫ್ ಐ ಉಳ್ಳಾಲ ವಲಯ ಅಧ್ಯಕ್ಷ ಜೀವನರಾಜ್ ಕುತ್ತಾರ್ ಮಾತನಾಡಿ ಜುಬೈರ್ ಹತ್ಯೆಗೆ ಸರಕಾರವೇ ನೇರ ಹೊಣೆಯಾಗಿದೆ. ಅದಕ್ಕಾಗಿ ಸರಕಾರ ಅವರ ಕುಟುಂಬಕ್ಕೆ ಗರಿಷ್ಠ 25 ಲಕ್ಷ ಪರಿಹಾರ ಮತ್ತು ಆರು ಮಂದಿ ಮಕ್ಕಳ ವಿದ್ಯಾಭ್ಯಾಸವನ್ನು ನೋಡಬೇಕಿದೆ. ಇತ್ತೀಚೆಗೆ ಪ್ರೊಫೆಸರ್ ಓರ್ವರು ನೀಡಿರುವ ವರದಿಯಲ್ಲಿ ಶೇ.10 ರಷ್ಟು ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನರಾಗಿದ್ದಾರೆ. ಅದರಲ್ಲಿ ಶೇ.3 ರಷ್ಟು ವಿದ್ಯಾರ್ಥಿನಿಯರೇ ಆಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಗಾಂಜಾ ಉಳ್ಳಾಲ ಭಾಗದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ ಅನ್ನುವುದಕ್ಕೆ ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಮೃತಪಟ್ಟವನ ಕೈಯಲ್ಲೂ ಗಾಂಜಾ ಇರುವುದು ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಸಭೆ ನಡೆಸಿ ಗಾಂಜಾ ಮುಕ್ತ ಗೊಳಿಸಲು ಚರ್ಚಿಸಬೇಕಿದೆ. ಇದರಿಂದ ಗಲಭೆ, ಕೋಮುಗಲಭೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದು ಎಂದರು.
ಈ ವೇಳೆ ಡಿವೈಎಫ್ ಐ ಜಿಲ್ಲಾ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಮತೊಷ್ ಬಜಾಲ್, ಕಾರ್ಯದರ್ಶಿ ರಝಾಕ್ ಮೊಂಟೆಪದವು, ಸಮುದಾಯ ಸಂಘಟನೆ ಮುಖಂಡ ವಾಸುದೇವ ಉಚ್ಚಿಲ್, ಕಾರ್ಮಿಕೆ ಮುಖಂಡೆ ಪದ್ಮಾವತಿ ಶೆಟ್ಟಿ, ಜುಬೈರ್ ಸಹೋದರರಾದ ಆಸೀಫ್, ಪುತ್ರ ನಿಹಾಲ್, ಸಾಲಿ ಪಾವೂರು, ಸಂತೋಷ್ ಪಿಲಾರ್, ಜತೆ ಕಾರ್ಯದರ್ಶಿ ಅಶ್ರಫ್ ಕೆ., ಸುಹೈಲ್ ಅಳೇಕಲ ಉಪಸ್ಥಿತರಿದ್ದರು.
ಸುನಿಲ್ ತೇವುಲ ನಿರೂಪಿಸಿದರು. ನಿತಿನ್ ಕುತ್ತಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ರಫೀಕ್ ಹರೇಕಳ ವಂದಿಸಿದರು.




























