UN NETWORKS
ಕೊಣಾಜೆ: ತಮ್ಮ ಅಪೂರ್ವವಾದ ಪ್ರತಿಭೆಯ ಮೂಲಕ ಯಕ್ಷಗಾನ ಲೋಕದಲ್ಲಿ ತನ್ನದೇ ಛಾಪು ಮೂಡಿಸಿ ಮೆರೆದವರು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು. ಅವರು ರಂಗದಲ್ಲಿ ಯಾವುದೇ ಪಾತ್ರವನ್ನು ನಿರ್ವಹಿಸಿದರೂ ಪಾತ್ರದ ಅಂತರಾಳಕ್ಕೆ ಇಳಿದು ಕುಣಿತ, ಭಾವಾಭಿನಯದ ಸೊಗಸಿನೊಂದಿಗೆ ಪಾತ್ರಕ್ಕೆ ನೈಜತೆಯನ್ನು ಕಟ್ಟಿಕೊಡುತ್ತಿದ್ದರು.
ಅವರ ಅಗಲಿಕೆ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ ಎಂದು ಯಕ್ಷಗಾನ ಗುರು, ಅಧ್ಯಾಪಕ ಸದಾಶಿವ ಶೆಟ್ಟಿಗಾರ್ ಕಿನ್ನಿಗೋಳಿ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ನಡೆದ `ಚಿಟ್ಟಾಣಿ ನೆನಪು’ ಸಂತಾಪ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಯಕ್ಷಗಾನ ಕ್ಷೇತ್ರದಲ್ಲಿ ಅದೆಷ್ಟೋ ಮಹಾನ್ ಸಾಧಕರು ಯಕ್ಷಗಾನ ಕ್ಷೇತ್ರದ ಬೆಳವಣಿಗೆಗೆ ಒಂದಲ್ಲ ಒಂದು ರೀತಿಯಲ್ಲಿ ಕಾರಣಕರ್ತರಾಗಿದ್ದಾರೆ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ತನ್ನ ಪ್ರಾಮಾಣಿಕವಾದ ಕಲಾಸೇವೆಯೊಂದಿಗೆ ಯಕ್ಷರಂಗದ ಶ್ರೀಮಂತಿಗೆ ತನ್ನದೇ ಆದ ಕೊಡುಗೆ ನೀಡಿದವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಹಾಗೂ ಪರಿಶ್ರಮಕ್ಕೆ ತಕ್ಕಂತೆ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿತ್ತು. ಇಂತಹ ಮಹಾನ್ ಕಲಾವಿದ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.
ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಮಾತನಾಡಿ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಯಕ್ಷಗಾನ ಕ್ಷೇತ್ರದ ಮಹಾನ್ ಸಾಧಕರಾಗಿದ್ದಾರೆ. ತನ್ನ ಕೊನೆಯ ಉಸಿರು ಇರುವವರೆಗೂ ಯಕ್ಷಗಾನವನ್ನೇ ಉಸಿರನ್ನಾಗಿಸಿಕೊಂಡು ಜೀವನ ನಡೆಸಿದವರು ಮಾತ್ರವಲ್ಲದೆ ಯಕ್ಷಗಾನವನ್ನು ಬಹಳ ಎತ್ತರಕ್ಕೆ ಬೆಳೆಸಿ ಅದರ ಶ್ರೀಮಂತಿಕೆಗೆ ಕಾರಣೀಕರ್ತರಾದವರು. ಯಕ್ಷಗಾನ ಲೋಕದ ದಿಗ್ಗಜನನ್ನು ನಾವಿಂದು ಕಳೆದುಕೊಂಡಿದ್ದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರವು ಇವರ ನಿಧನಕ್ಕೆ ಗಾಢ ಸಂತಾಪವನ್ನು ವ್ಯಕ್ತಪಡಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆಯ ಮೂಲಕ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ, ಹವ್ಯಾಸಿ ಕಲಾವಿದ ಅಕ್ಷಯ್ ಭಟ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



