UN NETWORKS
ಉಳ್ಳಾಲ: ಸಚಿವ ಖಾದರ್ ಅವರಿಗೆ ಘೇರಾವ್ ಹಾಕಿದ ಅರ್ಧ ಗಂಟೆಯಲ್ಲೇ ಹತ್ಯೆಗೀಡಾದ ಜುಬೈರ್ ಮನೆಗೆ ಭೇಟಿ ನೀಡಲು ಬಂದ ಸಂಸದ ನಳಿನ್ ಕುಮಾರ್ ಅವರನ್ನು ಮುಕ್ಕಚ್ಚೇರಿ ನಿವಾಸಿಗಳು ಸ್ವಾಗತಿಸಿ ಜುಬೈರ್ ವಾಸವಿದ್ದ ಬಾಡಿಗೆ ಮನೆಗೆ ಕರೆದೊಯ್ದಿದ್ದಾರೆ
ಮನೆಗೆ ಭೇಟಿ ನೀಡಿದ ಸಂಸದ ನಳಿನ್ ಕಟೀಲ್ ಮನೆಮಂದಿಗೆ ಸಾಂತ್ವನ ಹೇಳಿದರಲ್ಲದೆ, ಘಟನೆಯನ್ನು ಖಂಡಿಸಿದರು.
ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಸಂಸದರು ಜುಬೈರ್ ಅವರನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆಸಲಾಗಿದೆ. ಕೇರಳದ ಬಾಹ್ಯಶಕ್ತಿಯಿಂದಲೇ ಜುಬೈರ್ ಹತ್ಯೆ ನಡೆದಿದೆ. ಮೃತನ ಕುಟುಂಬಕ್ಕೆ ರಾಜ್ಯ ಸರಕಾರ ಕನಿಷ್ಟ ರೂ. 50 ಲಕ್ಷ ಪರಿಹಾರವನ್ನು ಒದಗಿಸಬೇಕಿದೆ.
ಅಲ್ಲದೆ ಹಂತಕರ ಬಂಧನದಲ್ಲಿ ಪೊಲೀಸರನ್ನು ನಿಯಂತ್ರಿಸಲು ಸರಕಾರ ಯತ್ನಿಸಿದಲ್ಲಿ ಉಗ್ರ ಹೋರಾಟ ಎದುರಿಸಬೇಕಾದೀತು ಎಂದ ಅವರು ಉಳ್ಳಾಲ ಮತ್ತು ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಹಿತಕರ ಘಟನೆಗಳಲ್ಲಿ ಮಾದಕ ವ್ಯಸನಿಗಳ ಫಾತ್ರವೇ ಹೆಚ್ಚಿದೆ. ಈ ಹಿಂದೆಯೂ ಮಾದಕ ವ್ಯಸನ ಜಾಲದ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿತ್ತು. ಆದರೆ ಅವರು ಕ್ರಮಕೈಗೊಳ್ಳದಿರುವುದರಿಂದ ಇದೀಗ ಜುಬೈರ್ ಮತ್ತು ಫರಂಗಿಪೇಟೆಯಲ್ಲಿ ಎರಡು ಕೊಲೆಗಳು ನಡೆದಿದೆ.
ಇಂತಹ ಘಟನೆಗಳನ್ನು ನೋಡಿದಾಗ ರಾಜ್ಯದಲ್ಲಿ ಜಂಗಲ್ ರಾಜ್ ವಾತಾವರಣ ನಿರ್ಮಾಣವಾದಂತೆ ಕಾಣುತ್ತಿದೆ. ಇದನ್ನೆಲ್ಲಾ ಗಮನಿಸಿದಾಗ ಕಾಂಗ್ರೆಸ್ ಸರಕಾರ ಡ್ರಗ್ ಮಾಫಿಯಾಗಳ ಜತೆಗೆ ಕೈಜೋಡಿಸಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.










































